ಶನಿವಾರ, ಅಕ್ಟೋಬರ್ 16

ಗೋಲಿಗಳಿಗೀಗ ಭಾರೀ ಡಿಮಾಂಡ್!

ಗೋಲಿ ಆಟವಾಡುವಾಗಿನಿಂದ ನಾನು ಸೋತಿದ್ದೇ ಇಲ್ಲ ಎಂಬುದಾಗಿ ಕರ್ನಾಟಕ ಸರ್ಕಾರದ ಆಧಾರ ಸ್ತಂಭವಾಗಿ ಬಿಂಬಿತವಾಗಿರುವ ಸಚಿವರೊಬ್ಬರು ನೀಡಿರುವ ಹೇಳಿಕೆಯಿಂದ ರಾಜ್ಯದಲ್ಲೀಗ ಗೋಲಿಗಳಿಗೆ ಹಾಗೂ ಗೋಲಿ ಆಟದ ತರಬೇತುದಾರರಿಗೆ ಭಾರೀ ಬೇಡಿಕೆ ಹುಟ್ಟಿಕೊಂಡಿದೆ.

ಮೊದಲಿಗೆ ಬಾಲ್ಯದಲ್ಲಿ ನಮ್ಮ ಬಳಿ ಒಂದೂ ಗೋಲಿ ಇರಲಿಲ್ಲ. ಸ್ನೇಹಿತರಿಂದ ಹೇಗೋ ಸಂಪಾದಿಸಿದ್ದ ಒಂದು ಗೋಲಿಯನ್ನೇ ಆಧಾರವಾಗಿಟ್ಟುಕೊಂಡು ಆಟ ಆರಂಭಿಸಿದ ನಾವು ಇದೀಗ ಇಡೀ ರಾಜ್ಯಕ್ಕೇ ಬೇಕಿದ್ದರೂ ಗೋಲಿ ಹಂಚುವಷ್ಟು ಶಕ್ತರಾಗಿದ್ದೇವೆ ಎಂದು ಸಚಿವರು ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.

ಗೋಲಿ ಆಟದಿಂದಲೇ ಪ್ರಖ್ಯಾತಿಗೆ ಬಂದಿರುವ ಕಾರಣ ನಮ್ಮ ಹೆಸರಿನ ಮುಂದೆ ಗೋಲಿ ಎಂಬುದು ಸೇರಿಕೊಂಡಿತ್ತು. ಆದರೆ ಹೆಸರು ನೋಂದಣಿಯಾಗುವಾಗ ಕಾರಕೂನ ತಪ್ಪಿನಿಂದಾಗಿ ನಮ್ಮ ಹೆಸರು ಗೋಲಿಯ ಬದಲಿಗೆ ಗಾಲಿಯಾಗಿ ಜಗಜ್ಜಾಹೀರಾಗಿದೆ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ನಾವು ಗೋಲಿಯಾಡುವಾಗ ಹಾಕಿರುವ ಪಟ್ಟುಗಳು ಮತ್ತು ಕಲಿತಿರುವ ತಂತ್ರಗಳಿಂದಾಗಿ ಎಂದಿಗೂ, ಎಲ್ಲಿಯೂ ನಾವು ಸೋಲನ್ನು ಕಂಡವರೇ ಅಲ್ಲ; ಹಾಗಾಗಿ ನಾವು ಇದೇ ತಂತ್ರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದು, ಇದೇ ನಮ್ಮ ಈ ಪರಿಯ ಬೆಳವಣಿಗೆಗೆ ಕಾರಣ ಎಂಬುದಾಗಿ ಅವರು ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದಿದ್ದರು.

ಬಾಲ್ಯದಲ್ಲಿ ಗೋಲಿ ಆಡುವಾಗ ಸಾಕಷ್ಟು ಪ್ರಮಾಣದಲ್ಲಿ ನಮಗೆ ಗೋಲಿ ಸಿಗದೇ ಇದ್ದುದೇ ನಾವು ಗೋಲಿ ಆಟವನ್ನು ಗಂಭೀರವಾಗಿ ಪರಿಗಣಿಸಲು ಕಾರಣವಾಗಿದ್ದು, ಇದಕ್ಕೆ ನಮ್ಮ ಸಹೋದದರು, ಸ್ನೇಹಿತರ ಬೆಂಬಲವೂ ಅಷ್ಟೇ ಗಣನೀಯ ಮತ್ತು ಸ್ಮರಣೀಯ ಎಂಬುದಾಗಿ ಅವರು ಮನದುಂಬಿ ನೆನಪಿಸಿಕೊಂಡರು.

ನಮಗೀಗ ರಾಜಕೀಯವಿರಲಿ, ಉದ್ಯಮವಿರಲೀ ಯಾವುದೇ ವ್ಯವಹಾರಗಳನ್ನು ನಿರ್ವಹಿಸುವುದು ಗೋಲಿ ಆಟದಷ್ಟೇ ಸುಲಭ. ಎದುರಾಳಿಯ ಗುಳಿಯಲ್ಲಿರುವ ಗೋಲಿಗೆ ಗುರಿ ಇರಿಸಿ ಅದನ್ನು ಕೈ ವಶ ಮಾಡಿಕೊಳ್ಳುವ ವಿದ್ಯೆ ಕರತಲಾಮಲಕವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಹಸನ್ಮುಖಿಯಾಗಿಯೇ ಸುದ್ದಿಗೋಷ್ಠಿ ಆರಂಭಸಿದ ಅವರು ಸುದ್ದಿಗಾರರ ಪ್ರಶ್ನೆಗೆ ತೀವ್ರ ಸಮಾಧಾನ, ಸಂತೋಷ ಹಾಗೂ ತಾಳ್ಮೆಯಿಂದಲೇ ಉತ್ತರಿಸಿದರು.

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವಾಗ ಹೆಚ್ಚಿನ ಸ್ಪಷ್ಟತೆಗಾಗಿ ಕಮಲಳ ಆಪರೇಷನ್ ಮತ್ತು ವಿಶ್ವಾಸದ ವೋಟು, ಪ್ರಕಾಶದ ವರ್ತೂರು ಮುಂತಾದ ಉದಾಹರಣೆಗಳನ್ನು ನೀಡಿದರು. ಈ ಹಿಂದೆ ಕಮಲಳು ಆಪರೇಷನ್ ಮಾಡಿದ್ದ ಕಾಲದಲ್ಲಿ ಲಾರಿಯಲ್ಲಿ ಲೋಡುಗಟ್ಟಲೆ ಶಾಸಕರನ್ನು ಅದಿರು ಮುಂತಾದುವುಗಳನ್ನು ಲಾರಿಯಲ್ಲಿ ತುಂಬಿಸಿ ಸಾಗಿಸುವಂತೆ, ಲೋಡುಗಟ್ಟಲೆ ತಂದು ಸುರಿದಿದ್ದನ್ನೂ ಸಹ ಉದಾಹರಣೆಯಾಗಿ ನೆನಪಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಬಿತ್ತರವಾಗಿರುವ ಸುದ್ದಿಯನ್ನು ವಿಶ್ಲೇಷಿಸಿರುವ ವಿಶ್ಲೇಷಕರು ಸರ್ಕಾರದ ಸ್ಥಿರತೆ-ಅಸ್ಥಿರತೆ ಮತ್ತು ಸ್ಥಿರಅಸ್ಥಿರತೆಗೆ ಗೋಲಿಯೇ ಕಾರಣ ಎಂದು ಹೇಳಿದ್ದಾರೆ.

ಸಚಿವರ ಈ ಅನುಭವದಿಂದ ಪ್ರೇರಿತರಾಗಿರುವವರು ಇದೀಗ ಗೋಲಿ ಆಟವನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ದಿನಬೆಳಗಾಗುವುದರೊಳಗೆ, ಗೋಲಿಗಳಿಗೆ ಮತ್ತು ಗೋಲಿ ಆಟದ ತರಬೇತುದಾರರಿಗೆ ಇನ್ನಿಲ್ಲದ ಡಿಮಾಂಡ್ ಸೃಷ್ಟಿಯಾಗಿದೆ. ಅಲ್ಲದೆ, ಜನಸಾಮಾನ್ಯರು ಇದೀಗ ಈ ಉದ್ಯಮದತ್ತ ಆಕರ್ಷಿತರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಬುಧವಾರ, ಸೆಪ್ಟೆಂಬರ್ 29

ಯಾರಿಗೆ ಮಂದಿರ... ಯಾರಿಗೆ ಮಸೀದೀ....

ಬಲ್ಲಿರೇನಯ್ಯಾ.......

ಭಳಿರೇ ಪರಾಕ್ರಮ ಕಂಠೀರವಾ.....

ಅಖಂಡ ಭರತ ಖಂಡದ ಅಯೋಧ್ಯೆಯನ್ನು ಆಳಿ ಜನಮನಗೆದ್ದಿರುವ ಮರ್ಯಾದಾ ಪುರುಷೋತ್ತಮ ಯಾರೆಂದು ಬಲ್ಲೀರಿ.......?

ಭಗವಾನ್ ಶ್ರೀರಾಮ ಚಂದ್ರ ಎಂದು ಕೇಳಿಬಲ್ಲೆವೂ....

ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದೂ....

ಸರಯೂ ನದಿಯ ತಟದಲ್ಲಿ ತರುಲತೆಗಳ ಬಳುಕು, ಪುಷ್ಪ ವನಗಳ ಥಳುಕಿನಿಂದ ಕಂಗೊಳಿಸುತ್ತಿದ್ದ ಅಯೋಧ್ಯೆಯಲ್ಲೇನೋ ಧಾವಂತದ ಮೌನ. ದೇಶಾದ್ಯಂತ ಎಲ್ಲರಲ್ಲೂ ಏನಾಗುತ್ತದೆಯೇನೋ ಎಂಬ ಆತಂಕ, ಎಲ್ಲೆಲ್ಲೂ ತಳಮಳ, ಕಳವಳ, ಆತಂಕ, ತಲ್ಲಣ, ವ್ಯಾಕುಲತೇ... ಎಲ್ಲೆಲ್ಲೂ ಖಾಖಿಗಳು. ವಾತಾವರಣವೆಲ್ಲ ಖಾಖಿಮಯಾ...

ಇಂತಹ ಸಮಯದಲ್ಲಿ ನಮ್ಮ ಒಡ್ಡೋಲಗ ಉಚಿತವೆಂದು ನಾವೀ ಒಡ್ಡೋಲಗಕ್ಕೆ ಬಂದಿದ್ದೇವೇ.... ಯಾರಲ್ಲೀ...

ಅಯ್ಯಾ ಶ್ರೀ ರಾಮಚಂದ್ರ ಪ್ರಭುವೇ.....

ನೀವು ಹುಟ್ಟಿದ ಜಾಗಕ್ಕಾಗಿ ಶತಮಾನಗಳಿಂದಲೇ ವಿವಾದ ನಡೆಯುತ್ತಿದೆ. ಹೋರಾಟಗಳು, ಹಾರಟಗಳು, ರಕ್ತಪಾತಗಳು ಆಗಿವೆ. ಇದೀಗ ಮತ್ತೆ ನಿಮ್ಮ ಜನ್ಮಸ್ಥಾನವೆಂದು ಹೇಳುತ್ತಿರುವ ಆ ನಿರ್ದಿಷ್ಟ ಸ್ಥಳವು ನಿಮ್ಮದ್ದೋ, ಅಥವಾ ಒಂದಾನೊಂದು ಕಾಲದಲ್ಲಿ ದೇಶವನ್ನು ಆಳಿದ್ದ ಬಾಬರ ಕಟ್ಟಿಸಿದ ಮಸೀದಿಯದ್ದಾ ಎಂಬುದನ್ನು ನ್ಯಾಯಾಲಯ ಹೇಳುವ ವೇಳಗೇ.....

ಭಾಗವತರೇ..... ನಾವು ಜೀವಿಸಿದ್ದೆವು ಎಂದು ಹೇಳಲಾಗುತ್ತಿರುವ ದಿನಗಳಿಂದಲೇ ವಿವಾದ ನಮಗೆ ತಪ್ಪಿದ್ದಲ್ಲ. ಹೋರಾಟದಲ್ಲೇ ಬೆಳೆದವರು ನಾವು. ಬಾಲ್ಯದ ಕೆಲವು ಸಮಯ ತಮ್ಮಂದಿರಾದ ಲಕ್ಷ್ಮಣ, ಭರತ-ಶತ್ರುಘ್ನರೊಂದಿಗೆ ಆಡಿ-ಪಾಡಿದ್ದಷ್ಟೆ ವಿವಾದಾದೀತ ಸಮಯ ಎನ್ನಬಹುದೂ.... ನಮ್ಮ ಚಿಕ್ಕಮ್ಮಳಿಗೆ ಮಂಥರೆ ಮಾಡಿದ ದುರ್ಭೋದನೆಯ ಪ್ರಚೋದನೆಯಿಂದಾಗಿ ನಾವು ಪಟ್ಟಾಭಿಷೇಕವನ್ನು ತ್ಯಜಿಸಿ ವನವಾಸಕ್ಕೆ ಹೋದಲ್ಲಿಂದ ನಾವು ಎಷ್ಟೊಂದು ಕಾರ್ಪಣ್ಯಗಳನ್ನು ಎದುರಿಸಿಲ್ಲಾ...

ಸ್ವಾಮೀ ದಶರಥ ಪುತ್ರರೇ... ವಿವಾದ ಎದ್ದಿರುವ ಸ್ಥಳದಲ್ಲೇ ನೀವು ಹುಟ್ಟಿದ್ದು ಎನ್ನುತ್ತಿರುವ ವರ್ಗ ಒಂದು ಅಲ್ಲೇ ನಿಮಗೆ ದೇಗುಲ ಕಟ್ಟಬೇಕೆಂದು ಟೊಂಕ ಕಟ್ಟಿದೆ. ಆದರೆ ಇನ್ನೊಂದು ವರ್ಗ ನಾವು ಹಲವು ಕಾಲದಿಂದ ನಮ್ಮ ಧಾರ್ಮಿಕ ಕಾರ್ಯಕ್ಕಾಗಿ ಉಪಯೋಗಿಸಿಕೊಂಡ ಸ್ಥಳ ಅದಾಗಿದ್ದು, ಅದು ನಮ್ಮದೆಂದು ಹಠ ಹಿಡಿಯುತ್ತಿದೆ. ಪರಮಾತ್ಮಾ.... ಆ ಜಾಗ ಯಾರದ್ದು....? ನೀನು ಅಲ್ಲಿಯೇ......

ಭಾಗವತರೇ ಸ್ವಲ್ಪ ಬಾಯಿ ಮುಚ್ಚುತ್ತೀರಾ......ಯಾವ ಧರ್ಮ, ಯಾವ ಪೂಜೆ, ಯಾವ ಆರಾಧನೆ? ಎಲ್ಲಾ ಧರ್ಮಕ್ಕಿಂತಲೂ ರಾಜಕೀಯದ ಕೊಳಕು ಧರ್ಮವಿದೆ ನೋಡಿ.... ಅದು ಅತ್ಯಂತ ಅಪಾಯಕಾರಿ..... ವಿವಿಧ ಪಕ್ಷಗಳ ಈ ರಾಜಕೀಯ ಮಂಥರೆಯರು ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನನ್ನ ಹೆಸರು ಹೇಳುತ್ತಾ, ಗಲಾಟೆ ಎಬ್ಬಿಸಿ, ಬೆಂಕಿ ಹೊತ್ತಿಸಿ, ರಕ್ತ ಹರಿಸಿ, ಹೆಣ ಉದುರಿಸಲು ಪ್ರೇರಣೆ ನೀಡುತ್ತಾರೆ ನೋಡಿ... ಅಮಾಯಕರು ದೊಂಬಿಯಲ್ಲಿ ಮುಳುಗಿದ್ದಾಗ, ಹವಾನಿಯಂತ್ರಿತ ಕೊಠಡಿಯಲ್ಲಿ ತಣ್ಣಗೆ ಕುಳಿತು, ಕೈಯಲ್ಲಿ ದೂರ ಸಂವೇದಿ ಗುಂಡಿ ಅದುಮುತ್ತಾ ತುಟಿಯಂಚಿನಲ್ಲಿ ವಕ್ರನಗೆ ಬೀರುತ್ತಾ, ಹರಿದ ರಕ್ತ, ಉದುರಿದ ಹೆಣಗಳು ಎಷ್ಟು ಮತಗಳಾಗಿ ಪರಿವರ್ತಿತವಾಗಬಹುದು ಎಂಬುದಾಗಿ ಲೆಕ್ಕ ಹಾಕುತ್ತಾರಲ್ಲಾ.... ಇದು ಯಾರ ಧರ್ಮವೂ ಅಲ್ಲಾ.... ಇದು ಯಾರ ಸಂಸ್ಕೃತಿಯೂ ಅಲ್ಲಾ....

ಇತ್ತೀಚೆಗೆ ನಾವೊಂದು ಸರ್ವಧರ್ಮ ಸಮ್ಮೇಳನವನ್ನು ಅಂತರಿಕ್ಷದಿಂದ ಗಮನಿಸುತ್ತಿದ್ದೆವು. ಅತ್ತ ತಿರುಗಿದರೆ, ಇಸ್ಲಾಮಿನ ಅಲ್ಲಾಹುವೂ, ಇತ್ತ ತಿರುಗಿದರೆ ಇತರ ಧರ್ಮದ ದೇವಾದಿಗಳೂ ಇದೇ ಸಮ್ಮೇಳನವನ್ನು ವೀಕ್ಷಿಸುತ್ತಿರುವುದು ಕಂಡು ಬಂತು. ಉಭಯ ಕುಶಲೋಪರಿಯ ಬಳಿಕ, ನಾವು ಈ ಜನರ ಹೇಸಿಗೆ ಹೋರಾಟದ ಕುರಿತು ಪರಸ್ಪರ ಮಾತಾಡಿಕೊಂಡೆವು. ಎಲ್ಲರಿಂದಲೂ ಹೊರಟದ್ದು ಖೇದಕರವಾದ ನಿಟ್ಟಿಸಿರು.

ಮರ್ಯಾದಾ ಪುರುಶೋತ್ತಮನೇ.... ನಿಮ್ಮ ಆರಾಧನೆಗೆ....

ಭಾವತರೇ...... ಯಾರಿಗೆ ಬೇಕಿದೆ ಮಂದಿರ- ಮಸೀದಿ...? ವೋಟಿನ ಮೇಲೆ ಕಣ್ಣಿಟ್ಟವರಿಗಿರುವ ಆಸಕ್ತಿ ನಮಗಿಲ್ಲ. ತಮ್ಮತಮ್ಮ ಟಿಆರ್‌ಪಿ ಏರಿಸಿಕೊಳ್ಳಲು ತುತ್ತೂರಿವರು ನೀಡುತ್ತಿರುವ ಕೊಡುಗೆಯೇನೂ ಕಮ್ಮಿ ಇಲ್ಲಾ.....ನಮ್ಮನ್ನು ಆರಾಧಿಸಲು ಆಡಂಬರವೇನೂ ಬೇಕಿಲ್ಲ. ಹೃದಯ ಮಂದಿರಕ್ಕಿಂತ ಪ್ರಶಸ್ತ ಸ್ಥಳ ಇನ್ಯಾವುದಿದೆ......? ಅಲ್ಲಾಹುವೇ ಹೇಳಿರುವುದನ್ನು ಪವಿತ್ರ ಕುರಾನ್‌ನಲ್ಲಿ ಉಲ್ಲೇಖಿಸಲಾಗಿದೆ. ನಮಗೆ ಮಸೀದಿಯೇ ಬೇಕಿಲ್ಲ.... ಶುಚಿರ್ಭೂತರಾಗಿ ಮೆಕ್ಕಾದ ದಿಕ್ಕಿಗೆ ಮುಖಮಾಡಿ ಎಲ್ಲಿಯೂ ನಮಿಸಬಹುದಾಗಿದೆ..... ಎಲ್ಲಾ ಧರ್ಮಗಳೂ ಹೆಚ್ಚೂ ಕಮ್ಮಿ ಇದನ್ನೇ ಹೇಳಿರುವುದೆಂಬುದನ್ನು ಮೊದಲು ಅರ್ಥಮಾಡಿಕೊಳ್ಳೀ...
ಯಾವ ಧರ್ಮದ ದೇವರಿಗೂ ಮಂದಿರ-ಮಸೀದಿ ಬೇಕಾಗಿಲ್ಲ. ಭಾವನೆಗಳನ್ನು ಕೆರಳಿಸುವವರನ್ನು ಮೊದಲು ಸದೆ ಬಡಿಯಬೇಕಾಗಿದೆ. ಇತಿಹಾಸಿದಿಂದ ಪಾಠ ಕಲಿಯದ ಮೂಢರುಗಳಿರಾ.... ಅವನು ಒಡೆದನೆಂದು ಇವನು, ಇವನು ಒಡೆದನೆಂದು ಅವನು ಒಡೆಯುತ್ತಾ ಹೋದರೇ..... ಒಡಕುಗಳೇ ತುಂಬಿಕೊಳ್ಳುತ್ತವೆ. ನೀವು ಧರ್ಮವನ್ನೇ ನಂಬುವರಾದರೇ... ಅದಕ್ಕೇ ಅಂಟಿಕೊಳ್ಳುವರಾದರೆ ಆಯಾ ಧರ್ಮಗಳಲ್ಲಿ ಹೇಳಿರುವ ಉದಾತ್ತ ಗುಣಗಳನ್ನು ಅನುಸರಿಸೀ... ನೆಮ್ಮದಿಯಿಂದ ಬದುಕುವುದ ಕಲಿಯಿರೀ.... ಎಲ್ಲರಿಗೂ ಒಳಿತಾಗಲೀ... ಸರ್ವೇಜನ ಸುಖಿನೋಭವಂತೂ.....
ಮಂಗಳಂ!

ಬುಧವಾರ, ಸೆಪ್ಟೆಂಬರ್ 22

ಚುನಾವಣೆ ಗೆಲ್ಲೋದು ಮಾತ್ರ ಅರ್ಹತೆಯಲ್ಲಾ...

ಭಳಿರೇ ಪರಾಕ್ರಮ ಕಂಠೀರವಾ.......

ಬಲ್ಲಿರೇನಯ್ಯಾ......

ಹ್ಹೋ.....ಹ್ಹೋ.....ಹ್ಹೋ.....ಹ್ಹೋ......ಹ್ಹೋ.....ಹ್ಹೋ........

ಈ......ನರ್ಕಾಟಕದ ಮಂತ್ರಿಮಂಡಲದ ಏಕೈಕ ಮಂತ್ರಿಣಿ ಯಾರೆಂದು ಕೇಳಿ ಬಲ್ಲಿರೀ....

ಭಾಶೋ ರಕಂದ್ಲಾಜೆ ಎಂದು ಕೇಳಿಬಲ್ಲೆವು......

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....

ಇರುವಂತಹಾ ಸ್ಥಳ.....?

ಬೆಂದಕಾಳೂರು ಎಂದುಕೊಳ್ಳಬಹುದೂ...

ಬಂದಂತಹಾ ಕಾರ್ಯ....?

ಗ್ರಾಮೀಣ ಪರಿಸ್ಥಿತಿಯ ಸ್ಥಿತಿಗತಿಗಳು ಸುಧಾರಣೆಗೊಳ್ಳಬೇಕು, ಮಹಿಳಾ ಸಮುದಾಯ ಮುಂದೆ ಬರಬೇಕು, ಬಡವರ ಉದ್ಧಾರವಾಗಬೇಕು, ಅರ್ಧಕ್ಕೆ ನಿಂತ ಕಾರ್ಯಗಳು ಮುಂದುವರಿಯಬೇಕು.... ಕರ್ನಾಟಕ ಸಾಮ್ರಾಟರ ಕೈ ಬಲಪಡಿಸಬೇಕು, .... ಒಂದೇ ಎರಡೇ.... ಅನೇಕವಿದೆ.... ಅನೇಕವಿದೆ.... ಅನೇಕವಿದೆ....

ಆಹಾ.... ಅದೆಷ್ಟು ಸುಂದರಮಯ ವಾತಾವರಣ. ಕನ್ನಡಾಂಬೆ ಎಷ್ಟೊಂದು ಹರ್ಷಚಿತ್ತದಿಂದಿದ್ದಾಳೆ...ಉದ್ಯಾನನಗರಿಯ ಚುಮುಚುಮು ಚಳಿಗೆ ಹಿತವೆನ್ನಿಸುವ ಎಳೆಬಿಸಿಲು. ಅದ್ಭುತ ಕಾವ್ಯದಂತಾಗಿರುವ ಈ ನಮ್ಮ ಸಿಲಿಕಾನ್ ಕಣಿವೆ. ಮೈತುಂಬ ಉಲ್ಲಾಸ, ಸಂತೋಷ ಪುಟಿಯುತ್ತಿದ್ದು; ಹುಮ್ಮಸ್ಸಿನಿಂದ ಕುಣಿಯುತ್ತಿರುವ ಮನಸ್ಸು.... ಆದಿತ್ಯ ದೇವನ ಬಂಗಾರ ಕಿರಣಗಳು ಇಳೆಯನ್ನು ಮುತ್ತಿಕ್ಕಲು ಧಾವಂತದಿಂದಲೋ ಎಂಬಂತೆ ಧಾವಿಸುವ ನೋಟ. ಆಹಾ ಪ್ರಪಂಚವೀಗ ಹಿಂದೆಂದೂ ಇಲ್ಲದಷ್ಟು ಸುಂದರವಾಗಿ ಕಂಗೊಳಿಸುತ್ತಿದೆ.. ನಿದಿರಾ ದೇವಿಯ ಮಡಿಲಿನಿಂದ ಎದ್ದ ನಮ್ಮನ್ನು ಈ ಪರಿಯ ಸೊಬಗಿಂದ ಸ್ವಾಗತಿಸಿದೆ.

ನಮ್ಮ ಅಭ್ಯಾಸದಂತೆ ನಸುಕಿನಲ್ಲೇ ಎದ್ದು, ಸ್ನಾನ ಶೌಚಾದಿ ಪ್ರಾಥವಿಧಿಗಳನ್ನು ತೀರಿಸಿಕೊಂಡೆವು. ಮಂತ್ರವನ್ನು ಜಪಿಸಿ, ಪೂಜೆಯನ್ನು ಮಾಡುತ್ತಾ ಇಷ್ಟದೈವ ಪುತ್ತೂರಿನ ಮಾಲಿಂಗೇಶ್ವರನಿಗೆ ವಿಶೇಷವಾಗಿ ಮತ್ತು ಹೆಚ್ಚೂಕಮ್ಮಿ ದೇಶಾದ್ಯಂತವಿರುವ ಎಲ್ಲಾ ಕಾರ್ಣೀಕದ ದೇವರಿಗೆ ವಂದಿಸಿಕೊಂಡದ್ದಾಯ್ತು. ಬಳಿಕ ನಮ್ಮೂರ ಗ್ಲೋಬಲ್ ತಿಂಡಿಯಾಗಿರುವ ಪುಂಡಿಯೆಂಬ ಉಪಾಹಾರವನ್ನು ಸೇವಿಸಿ, ಎಂದಿನಂತೆ ಸರಳವಾಗಿ ಸಿಂಗರಿಸಿಕೊಂಡು, ಮಿಣಮಿಣ ಸೀರೆಯೊಂದನ್ನು ಒಪ್ಪವಾಗಿ ಉಟ್ಟು, ಒಡ್ಡೋಲಗಕ್ಕಾಗಿ ಸಭಾಂಗಣಕ್ಕೆ ಬಂದು ಸಿಂಹಾಸನಕ್ಕೂ ಸಭೆಗೂ ವಂದಿಸಿ ಆಸೀನಾಳಾಗಿ ಸಭೆಯತ್ತ ನೋಟ ಹರಿಸುತ್ತೇವೇ..... ಆಶ್ಚರ್ಯ.... ಏನಾಶ್ಚರ್ಯ....? ಇದೇನಾಶ್ಚರ್ಯ....! ಪರಮಾಶ್ಚರ್ಯ......! ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಸಿಕ್ಕಸಿಕ್ಕಲ್ಲಿ ತಲೆತೂರುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರಿದ್ದಾರೆ. ವಂದಿ ಗಧರಿದ್ದಾರೆ. ಮಂದಿ ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ತಮ್ಮ ಆಯುಧಗಳನ್ನು ಸಿದ್ಧಪಡಿಸಿ ಕಾದಿದ್ದಾರೆ..... ಒಡ್ಡೋಲಗವನ್ನು ಆರಂಭಿಸಿಯೇ ಬಿಡೋಣವಂತೇ..... ಯಾರಲ್ಲೀ...

ಅಮ್ಮಾ.... ರಕಂದ್ಲಾಜೆಯವರೇ.... ಅಂತೂ ಗೊಂದಲ, ಬೆದರಿಕೆ, ವಿರೋಧ ಅಸಮಾಧಾನಗಳ ನಡುವೆ ನಿರೀಕ್ಷೆಯಂತೆಯೇ ತಾವು ಸಚಿವೆ ಪಟ್ಟವನ್ನು ಮರಳಿ ಪಡೆದಿದ್ದೀರಿ. ಮತ್ತೆ ಮಂತ್ರಿ ಕುರ್ಚಿ ಏರಿರುವ ತಮಗೆ ಅಭಿನಂದನೆಗಳು...... ತಾವೂ..

ನಿಮ್ಮ ಅಭಿವಂದನೆಗಳಿಗೆ ಧನ್ಯವಾದಗಳು. ನೋಡಿ ಭಾಗವತರೇ, ನಮಗೆ ಸಿಕ್ಕಿದ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ನಾವು ಮಾಡಿರುವ ಉತ್ತಮ ಕಾರ್ಯಗಳೇ ನಮ್ಮನ್ನು ಮತ್ತೆ ಮಂತ್ರಿ ಕುರ್ಚಿಗೆ ತಂದು ಕುಳ್ಳಿರಿಸಿದೆ. ನಮ್ಮದಲ್ಲದ ತಪ್ಪಿಗೆ ನಾವು ಈ ಹಿಂದೆ ರಾಜೀನಾಮೆ ನೀಡಬೇಕಾಯಿತು. ನಮ್ಮ ರಾಜೀನಾಮೆಗೆ ಗುಂಪೊಂದು ಒತ್ತಾಯಿಸಿದ್ದಾದರೂ ಯಾಕೆ ಎಂಬುದು ನಮಗೆ ಇನ್ನೂ ತಿಳಿದಿಲ್ಲ.

ಮಂತ್ರಿಣಿಯವರೇ, ತಾವು ಈ ಸಂಸ್ಥಾನದ ಮಹಾರಾಜರಿಗೆ ನಿಕಟವೆಂಬೋ ಕಾರಣಕ್ಕೇ ಮಂತ್ರಿಗಿರಿ ಪಡೆದೀರೆಂದು ಜನತೆ ಹೇಳುತ್ತಾರೆಂದರೆ ಅದು ಕ್ಲೀಷೆಯ ಮಾತಾಗುತ್ತದೆ. ಮಂತ್ರಿ ಮಂಡಲದಲ್ಲಿ ಏಕೈಕ ಮಹಿಳೆಯಾಗಿದ್ದ ತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೇರಲು ಅರ್ಹರಾದ ನಾಯಕಿಯರು ತಮ್ಮ ಪಕ್ಷದಲ್ಲಿ ಇದ್ದರೂ, ಅದು ಖಾಲಿಯಾಗೇ ಇತ್ತು. ನೀವಂದು ರಾಜೀನಾಮೆ ಕೊಡಬೇಕಾದ ಸಂದರ್ಭದಲ್ಲಿ ಈ ನಾಡಿನ ಮಹಾರಾಜರು ಪ್ರಜೆಗಳ ಮುಂದೆ ಕಣ್ಣೀರುಗರೆದದ್ದೂ ಇದೆ. ಆದರೆ ಮಂತ್ರಿ ಸ್ಥಾನ ಹೋದರೂ ವಿಚಲಿತರಾದ ತಾವು ಮಾತ್ರ, ನನ್ನ ರಾಜೀನಾಮೆ ಕೇಳಲು ಕಾರಣವೇನೂ ಎಂದು ಗಟ್ಟಿಸಿ ಕೇಳಿ ಉತ್ತರ ಸಿಗದೆ ಸುಮ್ಮನಾದಿರಿ. ಘಟಾನುಘಟಿಗಳನ್ನೆಲ್ಲ ಬದಿಗೆ ಸರಿಸಿ ಅಧಿಕಾರ ಪಡೆದಿರುವವರು ತಾವು. ಇದೆಲ್ಲದರ ಒಳಗುಟ್ಟೇನೂ.....

ಭಾಗವತರೇ ನಿಮ್ಮ ರಂಪಿಗೆ ನಾಲಗೆಯನ್ನು ಹೇಗೆಬೇಕೂ ಹಾಗೆ ಹರಿಯಬಿಡಬೇಡಿ. ನಾವೇನೂ ಅಧಿಕಾರಕ್ಕಾಗಿ ಎಲ್ಲಿಯೂ ಗುಂಪುಗಾರಿಕೆ ನಡೆಸಿಲ್ಲ. ಪಕ್ಷಕ್ಕೆ ಕಾಲಿಟ್ಟಲ್ಲಿಂದ ಒಪ್ಪಿಸಿದ ಅಧಿಕಾರವನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ನಡೆಸಿಕೊಂಡು ಬಂದು ಪಕ್ಷದ ಹಿರಿಯರ ಮೆಚ್ಚುಗೆ ಗಳಿಸಿದವರು ನಾವು. ನಮ್ಮ ಕಾರ್ಯವೈಖರಿಯನ್ನು ಕಂಡಿರುವ ಮಹಾರಾಜರು ನಮ್ಮನ್ನು ಪುತ್ರಿಯಂತೆ ಪೋಷಿಸುತ್ತಿದ್ದಾರೆ. ಇದನ್ನು ಕಂಡರಾಗದವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಅವರ ಕಣ್ಣಿಗೆ ಮುಳ್ಳಾಣಿ ಬಡಿಯಲಿ. ಮಂತ್ರಿಯಾಗಲು ಚುನಾವಣೆಯಲ್ಲಿ ಗೆಲ್ಲುವುದೇ ಅರ್ಹತೆ ಅಂದುಕೊಳ್ಳಲಾಗುತ್ತದಾ? ಅದೃಷ್ಟವಿರಬೇಕು, ಜನಸೇವೆ ಮಾಡಲು ತಿಳಿದಿರಬೇಕು. ರಾಜಕೀಯವನ್ನೂ ಮಾಡಬೇಕು ಗೊತ್ತಾಯಿತೇ.... ಈಗ ನೋಡಿ ನಾವು ಅಧಿಕಾರದಲ್ಲಿಲ್ಲದಾಗಲೂ ಜನಸೇವೆ ನಿಲ್ಲಿಸಿದ್ದೇವಾ? ಉತ್ತರ ಕರ್ನಾಟಕದ ಪ್ರವಾಹ ಪೀಡಿತರನ್ನು ಸಂತೈಸಲು ನಾವು ತೆರಳಿದ್ದೆವು. ಎಂಡೋಸಲ್ಫಾನ್ ಪೀಡಿತರ ಕಷ್ಟಕ್ಕೆ ಸ್ಪಂದಿಸಿದೆವು. ಹೀಗೆ ಪಟ್ಟಿಮಾಡಿದರೆ ಹಲವುಂಟು. ಗೆದ್ದು ಸಮ್ಮನೆ ಕುದ್ದರೆ ಸಾಕಾಗುವುದಿಲ್ಲ. ಉದಾಹರಣೆಗೆ ನೋಡಿ. ನಮ್ಮೂರಿನಿಂದ ಅತ್ತ ತಿರುಗಿದರೆ ಇರುವ ಸುಳ್ಯದ ಶಾಸಕ ರಂಗಾರ, ಇತ್ತತಿರುಗಿದರೆ ಕಾಣುವ ಮಂಗ್ಳೂರಿನ ಶೋಯೋಗಿ ಭಟ್ಟರು, ಕುಂದಾಪುರದ ಲಹಾಡಿ ನೀಶ್ರಿವಾಸ ಶೆಟ್ಟರು- ಇವರೆಲ್ಲ ನಾಲ್ಕುನಾಲ್ಕು ಬಾರಿ ಗೆದ್ದು, ಮಂತ್ರಿ ಸ್ಥಾನ ಸಿಗದೆ ಬಿದ್ದವರು. ಸುಳ್ಯವೆಂಬೋ ಕ್ಷೇತ್ರಕ್ಕೂ ಒಬ್ಬ ಶಾಸಕರಿದ್ದಾರೆಯೇ ಎಂದು ಜನರು ಕೇಳುವಷ್ಟು ಮಟ್ಟಿಗೆ ತಣ್ಣಗಿದ್ದಾರೆ ರಂಗಾರ. ಇವರೆಲ್ಲ ಪಕ್ಷದ ತೀರ್ಮಾನಕ್ಕೆ ಸದ್ದುಸುದ್ದಿಯಿಲ್ಲದೇ ಬದ್ಧರಾಗಿರುವಾಗ ಕೆಲಕೆಲವರು ಕೆರಳಿದರೆ ನಮಗೇನಂತೇ? ಈಗ ನೋಡಿ ಮಂಗಳೂರನ್ನೇ ತೆಗೆದುಕೊಳ್ಳಿ. ಹಲವು ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ಇದ್ದ ಭಟ್ಟರನ್ನು ಪಕ್ಕದ ಸುರತ್ಕಲ್ ಶಾಸಕ ಲೇಪಮಾರರು ಬದಿಗೆ ಸರಿಸಿ ಮಂತ್ರಿಯಾಗಿಲ್ಲವೇ... ಪ್ರತಿಯೊಂದಕ್ಕೂ ಅದರದ್ದೇ ಕಾರಣಗಳಿರುತ್ತವೆ. ರಾಜನೀತಿಯಲ್ಲಿ ಅವುಗಳನ್ನೆಲ್ಲ ಬಹಿರಂಗವಾಗಿ ಹೇಳಲಾಗುವುದಿಲ್ಲಾ...

ತಮ್ಮ ಮುಂದಿನ ಯೋಜನೆಗಳೇನೂ ತಾಯೀ...
ನಮಗೆ ಒಪ್ಪಿಸಿದ ಕಾರ್ಯವನ್ನು ಮುತುವರ್ಜಿಯಿಂದ ವಹಿಸಿಕೊಳ್ಳುತ್ತೇವೆ. ಯಾವುದೇ ಜವಾಬ್ದಾರಿಗೂ ಸಿದ್ಧ. ಜನತೆಯ ಅದರಲ್ಲೂ ಗ್ರಾಮೀಣ ಜನತೆಯ ಉದ್ಧಾರವೇ ನಮ್ಮ ಗುರಿ. ಅದರಲ್ಲೂ ಗ್ರಾಮೀಣ ಹೆಣ್ಣುಮಕ್ಕಳು ತಮ್ಮ ಕಷ್ಟಕೋಟಲೆಯಿಂದ ಹೊರಬರಬೇಕೆಂಬುದೇ ನಮ್ಮ ಹೋರಾಟ. ಭಾಗವತರೇ ಕಾದು ನೋಡುವಿರಂತೇ.... ಎಲ್ಲವೂ ಪುತ್ತೂರಿನ ಮಹಾಲಿಂಗೇಶ್ವರನ ಇಚ್ಛೆ.

ಸರಿ ರಕಂದ್ಲಾಜೆಯವರೇ.... ಇಂದಷ್ಟೆ ಅಧಿಕಾರ ಸ್ವೀಕರಿಸಿರುವ ತಾವು ಅವಸರದಲ್ಲಿದ್ದಂತೆ ತೋರುತ್ತದೆ. ಮತ್ತೊಮ್ಮೆ ಸಾವಕಾಶವಾಗಿ ಭೇಟಿಯಾಗೊಣ ಎನ್ನುತ್ತಾ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ. ಎಲ್ಲರಿಗೂ ಒಳಿತಾಗಲೀ.. ಸರ್ವೇಜನ ಸುಖಿನೋಭವಂತು...!

ಮಂಗಳಂ......

ಸೋಮವಾರ, ಸೆಪ್ಟೆಂಬರ್ 13

ಮಳೆ, ಆಷಾಢ, ಅಳಿಯ, ಎಮ್ಮೆ ಇತ್ಯಾದಿ...

"ಬರಗಾಲಕ್ಕೆ ಬಿದ್ದಂತೆ ಮಳೆಗಾಗಿ ಚಾತಕ ಪಕ್ಷಿಯಾಗಿದ್ದ ನಿನಗೇ ಎಂಬಂತೆ ಇಷ್ಟೊಂದು ಮಳೆ ಸುರಿಸಿದರೂ ಇನ್ನೂ ಬರೆಯದೇ ಬಿದ್ದಿದ್ಯಲ್ಲ, ನಿನ್ನ ಮುಖಕ್ಕಿಷ್ಟು..." ಎಂದು ಬಯ್ದಂತಾಯಿತು. ಮಳೆಯನ್ನು, ನೀರನ್ನು ಬ್ಲಾಗಿನಲ್ಲಿ ಸುರಿಸಬೇಕೆಂಬ ಯೋಜನೆಯನ್ನು ಮುಂದೂಡುತ್ತಲೇ ಇರುವಾಗ, ಮಧ್ಯೆ ಒಂದಿಷ್ಟು ಬಿಸಿಲ ಗ್ಯಾಪ್ ನೀಡಿ, ಮತ್ತೆ ಮತ್ತೆ ದಿನಪೂರ್ತಿ ಸುರಿದ ಧೋ ಮಳೆ ನನ್ನ ಮುಖಕ್ಕೆ ರಾಚುತ್ತಿರಬೇಕಿದ್ದರೆ ಮೇಲಿನಂತೆ ಧ್ವನಿಸಿತ್ತು ನನಗೆ. ಹಾಗಾಗಿ ಈ ಅಪ್‌ಡೇಟ್.

ಬೇಸಗೆಯಲ್ಲಿ ಬಿರುಬಿಸಿಲಿನ ಮೂಲಕ ಬೆವರಿಳಿಸಿದ ಸೂರ್ಯನ ಮುಖದಲ್ಲಿ ನೀರಿಳಿಸುವಂತೆ ಮಳೆ ಸುರಿದಾಗ, ಇಂತಹ ಮಳೆಗಾಗಿ ಮೂರೂವರೆ ವರ್ಷದಿಂದ ಕಾದು ಮರಳಿ ಮಳೆಯೂರ ವಾಸಿಯಾಗಿರುವ ನನಗೆ ಇದೇ ಮಳೆಯನ್ನು ಬ್ಲಾಗಿನಲ್ಲಿ ಸುರಿಸಬೇಕೆಂದೆನಿಸಿತ್ತು. ದಿವ್ಯ ಸೋಂಬೇರಿಯಾಗಿರುವ ನಾನು ಇಂದು ನಾಳೆ ಎನ್ನುತ್ತಿರುವಾಗಲೇ ಮಳೆಯ ಬಿರುಸು ಕಡಿಮೆಯಾದಂತಾಗಿ, ಸಾಯ್ಲಿ ಬೇಡ ಎಂದು ತೀರ್ಮಾನಿಸಿದ್ದೆ.

ಅದಕ್ಕೆ ಸರಿ ಎಂಬಂತೆ, ನನ್ನಣ್ಣ ಫೋನಿಸಿ ಆಷಾಢಕ್ಕೆ ಕರೆದೊಯ್ಯಲು ಬರುತ್ತೇನೆ ಅಂದಿದ್ದ. ಈ ವಾರ, ಮುಂದಿನ ವಾರ ಎಂದು ಅವನನ್ನು ಸತಾಯಿಸಿ ಆಷಾಢ ಇನ್ನೆರಡು ದಿನ ಇದೆ ಎಂದಾಗ ಹೊರಟೆ. ಆದರೆ ಅದಕ್ಕೂ ವಿಘ್ನ. ಅದೇ ದಿನ ಆತ್ಮೀಯರೊಬ್ಬರು ನಮಗಾಗಿ ಔತಣ ಏರ್ಪಡಿಸಿದ್ದಾಗ ಅಲ್ಲೂ ಇಲ್ಲವೆನ್ನಲಾಗದೆ - ಇಲ್ಲೂ ಇಲ್ಲವೆನ್ನಲಾಗದೆ, ಇಕ್ಕಡೆಯಲ್ಲೂ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರೆಯ ಬಂದ ಅಣ್ಣನಿಗೆ ಅನಾರೋಗ್ಯದ ನೆಪ ಮುಂದಿಟ್ಟು, ಇಂದು ಬರಲಾಗುವುದಿಲ್ಲ ನಾಳೆ ಎಂದು, ಕೊನೆಗೆ ನನ್ನ ಮಗ(ಅಕ್ಕನ) ಶರತ್ ಹೇಳಿದಂತೆ ಒಬ್ಬಳೇ ತವರಿಗೆ ತೆರಳಿದೆ. (ತಂಗಿಯನ್ನು ಕರೆಯ ಬರುವ ಅಣ್ಣನಿಗೆ ಜತೆಯಾಗುವಂತೆ ಪಿಯು ಕಲಿಯುತ್ತಿರುವ ಶರತ್‌ಗೆ ಹೇಳಲಾಗಿತ್ತು. ಅವನಿಗೆ ನಗುವೋ ನಗು. ಒಂಟಿ ಸಲಗಿಯಂತೆ ಊರೂರು ಅಲೆದಿರುವ ಚಿಕ್ಕಮ್ಮನನ್ನು ಕರೆತರುವುದು ಅವನಿಗೆ ದೊಡ್ಡ ಸೋಜಿಗವಾಗಿ ಕಂಡಿತ್ತು!!)

ಕೊನೆಗೂ ಆಷಾಢಕ್ಕೆ ಹೋದೆ. ಅತ್ತೆ ಬರ್ತಾರೇ ಅಂತ ತಿಂಗಳಿನಿಂದ ಕಾದಿದ್ದ ನಾಲ್ಕರ ಹರೆಯದ ನನ್ನಳಿಯಗೆ ಸಂಭ್ರಮವೋ ಸಂಭ್ರಮ. ಶಾಲೆಯಿಂದ (ಹಳ್ಳಿಯಲ್ಲಿ ಅಂಗನವಾಡಿಗೆ ಹೋಗುತ್ತಿರುವ ಆತನಿಗೆ ‘ಸ್ಕೂಲ್’ ಗೊತ್ತಿಲ್ಲ) ಬಂದವನೇ ಡಬ್ಲ್ಯುಡಬ್ಲ್ಯುಎಫ್ ಪ್ರೇರಣೆಯಂತೆ ನನ್ನಮೇಲೆ ಹಾರಿದ, ಒದ್ದ - ಗುದ್ದಿದ. ನಂಗೆ ಅಂಟಿಯೇ ಇದ್ದ ಅವನೊಂದಿಗೆ ಜೆಸಿಬಿ ಓಡಿಸಿ, ಕಾರ್ ಕೆಡವಿ, ಕ್ರಿಕೆಟ್ ಆಡಿ, ಬೊಂಬೆ ದೂಡಿ ಬೋರಾದಾಗ ತೋಟಕ್ಕೆ ಹೊರಟೆವು.

ಮೇಲೆ ತೋಟದ ಮೂಲೆಯಲ್ಲಿರುವ ಅವ್ವನ ಹೊಸ ಜಾಗಕ್ಕೆ ತೆರಳಿ ನಮಿಸಿ ಹಿಂತಿರುಗುವಾಗ ಕೈಯನ್ನು ಎಳೆಯಲಾರಂಭಿಸಿದ ವಿ(ಘ್ನೇ)ಶು ಕೆಳ ತೋಟಕ್ಕೆ ಹೋಗ್ವಾ ಅಂತಾ ಒತ್ತಾಯಿಸಿದ. ಸಿಂಗಮಾಮನ ತೋಟಕ್ಕೆ ಅಂಟಿಕೊಂಡಿರುವ ನಮ್ಮ ತೋಟದ ಅಂಚಿನ ತನಕ ಹೋದೆವು. ಚಚಿಪಿಚಿ ಕೆಸರಿನಲ್ಲಿ ಕಾಲಿಟ್ಟೆವು. ಕಂಠಮಟ್ಟ ನೀರಿನಿಂದ ತುಳುಕುತ್ತಿದ್ದ ಕೆರೆಬಳಿ ತೆರಳಿ ನೀರೊಳಗೆ ಪುಳುಪುಳುಕ್ಕೆಂದು ಸೊಂಟ ಬಳುಕಿಸಿ ಓಡುವ ಮೀನುಗಳನ್ನು ನೋಡಿದೆವು. ಕಂಗು-ಬಾಳೆಯ ಪ್ರತಿಬಿಂಬವನ್ನು ನುಂಗಿ ಗಾಂಭಿರ್ಯವೇ ಮೈವೆತ್ತಂತೆ ನಿಂತಿದ್ದ ಸ್ಪಟಿಕಶುದ್ಧಿಯ ನೀರಿಗೆ ಪುಟ್ಟಪುಟ್ಟ ಕಲ್ಲುಗಳನ್ನು ಎಸೆದ ಅಳಿಯನಿಗೆ ಅದರಿಂದೇಳುವ ತರಂಗಗಳಲ್ಲಿ ಕಂಗಿನ ಮರದ ಬಿಂಬ ಮುರಿದಂತಾಯಿತೇಕೆ ಎಂಬ ಕೌತುಕ.

ಕತ್ತಲಾಯಿತು ಹೋಗೋಣ ಪುಟ್ಟಾ ಅನ್ನುತ್ತಾ ಹೊರಟೆ ಮನೆಗೆ. ತೋಡಿನ (ತೊರೆ) ಬಳಿ ಬಂದಾಗ ಓಡಿ ನೀರಿಗಿಳಿದು ಬಿದ್ದುಗಿದ್ದಾನೆಂಬ ಭಯಕ್ಕೆ ಅವನ ಕೈ ಗಟ್ಟಿ ಹಿಡಿದಿದ್ದೆ. ಅತ್ತೇ ನೀರಿಗಿಳಿಯುವಾ ಎಂದ. ಬೇಡ ಅಮ್ಮ ಬಯ್ತಾರೆಂದು ಗದರಿ ಮುಂದೆ ಸಾಗಿದೆ. ಮಗು ಮತ್ತೆಮತ್ತೆ ಹಿಂತಿರುಗಿ ಹರಿವ ನೀರನ್ನು ತನ್ನ ಹೊಳೆವ ಕಂಗಳಲ್ಲಿ ಆಸೆಯಿಂದ ನೋಡುತ್ತಾ ನೋಡುತ್ತಾ ನನ್ನ ಕೈಯನ್ನು ಹಿಂದಿಂದೆಗೇ ಜಗ್ಗುತ್ತಿದ್ದ. ಮಗುವಿನ ಆಸೆ ಪೂರೈಸುವಾ ಎಂದು ಹಿಂತಿರುಗಿದೆ. ರಾಮರಾಮಾ... ಅವನ ಖುಷಿಯೋ... ತನ್ನ ಚೋಟುದ್ದ ಚಡ್ಡಿ ಮಡಚುತ್ತಾ, ಅತ್ತೇ ನಿನ್ನ ಪ್ಯಾಂಟು ಮಡಚು, ಚಂಡಿ ಆದರೆ ಅಮ್ಮ ಬಯ್ತಾರೆಂದು ನನ್ನನ್ನು ಎಚ್ಚರಿಸಿದ. ಮುದ್ದುಮುದ್ದು ಕಾಲನ್ನು ಅವಚಿದ್ದ ಪುಟ್ಟ ಚಪ್ಪಲನ್ನು ಅವಸರವಸರದಲ್ಲಿ ಕಳಚಿ, ಥಳುಕು ಬಳುಕಿನೊಂದಿಗೆ ರಭಸದಿಂದ ಹರಿಯುತ್ತಿದ್ದ ನೀರಿಗೆ ಇಳಿದೆವು. ಏನು ಖುಷಿ ಹುಡುಗನಿಗೆ. ನೀರೇ ಕಾಣದವರಂತೆ ಕುಣಿತ, ನಗು, ಕೇಕೆ. ಅಷ್ಟೂ ನೀರನ್ನು ತನ್ನ ಪುಟ್ಟ ಬೊಗಸೆಯಲ್ಲಿ ತುಂಬುವ ಯತ್ನ. ಪುಟ್ಟಪುಟ್ಟ ಕಲ್ಲುಗಳನ್ನು ಅಮೂಲ್ಯ ಹರಳುಗಳಂತೆ ಹೆಕ್ಕುವುದೇನು, ಅವುಗಳನ್ನು ಬೀಸಿಬೀಸಿ ಒಗೆಯುವುದೇನು. ಆ ಸದ್ದಿಗೆ ಪುಳಕಗೊಳ್ಳುವುದೇನು. ನೀರೊಳಗೆ ಮಿನುಗುತ್ತಿದ್ದ ನನ್ನ ಕಾಲ್ಬೆರಳ ಬಣ್ಣ ಅವನಿಗೆ ಬಂಗಾದಂತೆ ಕಂಡಿತೋ, ಮುಟ್ಟಿಮುಟ್ಟಿ ಸವರಿದ. ಪಾಚಿಬಂಡೆ ಮೇಲೆ ಕಾಲಿರಿಸಿ ಜಾರಿದ, ಸುಳ್ಳುಸುಳ್ಳೇ ಬಿದ್ದ, ಮೈಯೀಡೀ ಒದ್ದೆಯಾಗುವಂತೆ ಮಲಗಿದ, ಎದ್ದ. ಅತ್ತೇ ನಾವಿಂದು ಇಲ್ಲೇ ಇರುವಾ ಎಂಬ ಬೇಡಿಕೆ ಇಟ್ಟ.

ಆಕಾಶಕ್ಕೆ ತೂತುಬಿದ್ದಂತೆ ಮೂರ್ನಾಲ್ಕು ದಿನ ನಿರಂತರವಾಗಿ ಮಳೆ ಹುಯ್ಯುತ್ತಿದ್ದ ಅಂದಿನ ದಿನಗಳಲ್ಲಿ ನಾನು ಮತ್ತು ಅಣ್ಣ ಇದೇ ತೋಡಿಗೆ ಪ್ರವಾಹದ ನೀರು ನೋಡಲು ಹೋಗುತ್ತಿದ್ದೆವು. ಮಳೆ ನೀರೆಲ್ಲ ಕೊಚ್ಚಿ ಮಣ್ಣಿನೊಂದಿಗೆ ಬೆರೆತು ಕೆಂಬಣ್ಣವಾಗಿ ತೋಡಿಗಿಳಿದು, ಸುಮಾರು ಒಂದೂವರೆ ಆಳೆತ್ತರದಲ್ಲಿ ರಭಸದಿಂದ ಸಶಬ್ದವಾಗಿ ಹರಿಯುವ ವೇಳೆ ಅದರ ರುದ್ರ ಸೌಂದರ್ಯ ಭಯ ಮಿಶ್ರಿತ ಆನಂದ ನೀಡುತ್ತಿತ್ತು. ಕತೆಗಳಲ್ಲಿ ಕೇಳಿದಂತೆ ಚಿನ್ನದ ನಾಣ್ಯಗಳಿಂದ ತುಂಬಿದ ಕೊಪ್ಪರಿಗೆಯೇನಾದರೂ ನೀರಿನಲ್ಲಿ ತೇಲಿಬಂದು ನನ್ನ ಬಳಿ ನಿಂತು ಬಾಗಿಲು ತೆರೆದರೆ ಯಾವುದರಲ್ಲಿ ಮೊಗೆದುಕೊಳ್ಳಲೀ ಎಂಬ ದುರಾಸೆ ನನ್ನದಾದರೆ, ನೀರಿನಲ್ಲಿ ತೇಲಿ ಬರುವ ತೆಂಗಿನ ಕಾಯಿ ಹಿಡಿಯುವ ಸಾಹಸ ಅಣ್ಣನಿಗೆ.

ಹೀಗೆ ಅದೊಮ್ಮೆ ನಾವಿಬ್ಬರು ತೊರೆ ಬದಿ ನಿಂತಿದ್ದಾಗ ಇಂದಿರಾ ಟೀಚರ ಎಮ್ಮೆ ನೀರಿನಲ್ಲಿ ತೇಲಿ ಹೋಯಿತು. 'ಅಯ್ಯೋ ಎಮ್ಮೆ' ಅಂದ ಅಣ್ಣ, ಕೈಯಲ್ಲಿ ಹಿಡಿ ಹುಲ್ಲುಕಿತ್ತು ಎಮ್ಮೆಗೆ ತೋರಿದ. ಹುಲ್ಲಿನಾಸೆಗೆ ತಿರುಗಿ ಬರಲೀ ಎಂದು. ಆದರೆ ಪಾಪದ ಎಮ್ಮೆಗೆ ಸ್ವಯಂ ಆಧರಿಸಿಕೊಳ್ಳಲಾಗದ ವೇಗದಲ್ಲಿ ನೀರು ಹರಿಯುತ್ತಿತ್ತು. ಆಸೆಯ ಕಂಗಳಿಂದ ನಮ್ಮತ್ತ ದಯನೀಯವಾಗಿ ತಿರುತಿರುಗಿ ನೋಡಿದ ನೋಟ ಕರುಳು ಕಿವುಚಿತ್ತು. ಅಣ್ಣ ನನ್ನನ್ನು ಒಂದು ಸುರಕ್ಷಿತವಾದ ಜಾಗದಲ್ಲಿ ನಿಲ್ಲಿಸಿ, ಮತ್ತೊಂದೆಡೆ ತೋಡಿಗೆ ಸಮವಿರುವ ರಸ್ತೆಯಿಂದ ಓಡಿದ. ಸುಮಾರು ಒಂದೂವರೆ ಕಿಲೋ‌ಮೀಟರ್ ದೂರದಲ್ಲಿ ತೋಡು ರಸ್ತೆಯನ್ನು ಕ್ರಾಸ್ ಮಾಡುವ ಜಾಗಕ್ಕೆ ಬರಿಗಾಲಲ್ಲಿ ಓಡಿದ. ಪುಣ್ಯಕ್ಕೆ ನೀರಲ್ಲಿ ಕೊಚ್ಚಿದ್ದ ಎಮ್ಮೆ ಅಲ್ಲಿ ತಲುಪುವಷ್ಟರಲ್ಲಿ ಇವನೂ ಅಲ್ಲಿ ತಲುಪಿ, ನೀರಿನೊಂದಿಗೆ ಸೆಣಸಾಡಿ ಎಮ್ಮೆಯನ್ನು ಬಚಾವ್ ಮಾಡಿ ಇಂದಿರ ಟೀಚರ ಮನೆಯತ್ತ ಅಟ್ಟಿದ್ದ.

ಅಷ್ಟೊತ್ತು "ಸ್ವಾಮೀ ದೇವಾ ಎಮ್ಮೆ ಸಿಗಲೀ" ಎಂದು ಪ್ರಾರ್ಥಿಸುತ್ತಾ ನಿಂತಿದ್ದ ನನಗೆ ಅಣ್ಣ ಬಂದು ಎಮ್ಮೆಯನ್ನು ರಕ್ಷಿಸಿದ ಸಾಹಸಗಾಥೆ ಹೇಳುತ್ತಿದ್ದರೆ, ಸಡನ್ ದುಃಖವಾಗತೊಡಗಿತು. ಛೇ, ಎಮ್ಮೆಯ ಬದಲು ಸಾಕ್ಷಾತ್ ಇಂದಿರಾ ಟೀಚರೇ ಬೊಳ್ಳದಲ್ಲಿ (ನೀರಿನಲ್ಲಿ) ಕೊಚ್ಚಿ ಹೋಗಿಲ್ಲವಲ್ಲಾ ಎಂಬ ಬೇಸರ ಕಾಡಿತು. ಸದಾ ಮಗ್ಗಿ ಕಲಿಯಿರಿ, ಲೆಕ್ಕ ಮಾಡಿ ಎಂದೆಲ್ಲ ಹಿಂಸಿಸಿ, ಒಮ್ಮೊಮ್ಮೆ ಕಿವಿ ಹಿಂಡಿ - ತಲೆಗೆ ಕುಟ್ಟಿ ಹಾಕುತ್ತಾ ನಮ್ಮ ಆಟ, ಮತ್ತಿನ್ನಿತರ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದ ಅವರನ್ನು ನಾವು ವಿಲನ್ ಎಂದೇ ಪರಿಗಣಿಸಿದ್ದೆವು. (ನಾಟಕದಲ್ಲಿ ಪಾರ್ಟು ಕೊಟ್ಟು ನನ್ನನ್ನು ಆ ಊರಿನ 'ಮಹಾನ್ ಕಲಾವಿದೆ'ಯಾಗಿಸಿದ್ದು ಅದೇ ಇಂದಿರಾ ಟೀಚರ್ ಎಂಬುದು ನಂತರದ ವಿಚಾರ)

ಈ ಎಲ್ಲ ಸಂಗತಿ ನೆನಪಾಗಿ ವಿಘ್ನೇಶನ ಕೈಯ ಬಿಗಿತ ಒಂಚೂರು ಸಡಿಲವಾಯಿತು. ನನ್ನ ಕೈ ಜಾರಿಸಿ ಭುಳುಂಕೆಂದು ನೀರಿಗೆ ಬಿದ್ದ ಅವನಿಗೆ ಹೆದರಿಕೆ ಹೋಗಲು ಒಂದು ಪ್ರೀತಿಯ ಏಟು ಬಿಗಿದು, ನೀರಿಂದ ಮೇಲೆ ಬಂದೆವು. ಒದ್ದೆಯಾದ ಚಡ್ಡಿಹಾಕಿ ನಡೆಯಲು ಅವಸ್ಥೆ ಪಡುತ್ತಿದ್ದ ಅವನ ಚಡ್ಡಿ ಕಳಚಿದೆ. ತನ್ನ ಗೇಣುದ್ದದ ಬನಿಯನ್ ಎಳೆದೂ ಎಳೆದೂ ಮಾನ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವನೊಂದಿಗೆ ನಸುನಗುತ್ತಾ ಮನೆಯತ್ತ ಹೆಜ್ಜೆ ಹಾಕಿದೆ.

(ವಿ.ಸೂ: ಮಳೆಯ ಬಗ್ಗೆ ಎನ್ನುತ್ತಾ, ಆಷಾಢದ ಬಗ್ಗೆ, ಅದು ಸಹ ಶ್ರಾವಣ ಕಳೆದು ಭಾದ್ರಪದದಲ್ಲಿ ಬರೆದು... ಇದೆಂತಾ ಅನ್ನಬೇಡಿ., ತೆಂಗಿನ ಮರದ ಬಗ್ಗೆ ತಯ್ಯಾರಾಗಿ ಕ್ಲಾಸಿಗೆ ಹೋಗಿದ್ದ ವಿದ್ಯಾರ್ಥಿಗೆ ಮಾಸ್ಟ್ರು ಹಸುವಿನ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದು , ಕೊನೆಗೆ ತೆಂಗಿನ ಮರವನ್ನೆಲ್ಲಾ ವರ್ಣಿಸಿ, ಇಂತಹ ತೆಂಗಿನ ಮರಕ್ಕೆ ಹಸುವನ್ನು ಎಳೆದು ಕಟ್ಟಲಾಯಿತು ಎಂದು ವಿದ್ಯಾರ್ಥಿ ಪ್ರಂಬಂಧ ಮುಗಿಸಿದ್ದು ನಿಮಗೆ ಗೊತ್ತಿರಬಹುದು!!)

ಮಂಗಳವಾರ, ಆಗಸ್ಟ್ 3

ಆಫೀಸೆಲ್ಲಾ..... ನಾತಮಯಾ....

ಆಗೀಗ ಗಾಳಿಯೊಂದಿಗೆ ಕೆಟ್ಟ ವಾಸನೆ ಪಸರಿಸುತ್ತಿತ್ತು. ಭಾನುವಾರದ ಗಮ್ಮತ್ತಿನೂಟದ ಪ್ರಭಾವವಿರಬೇಕು. ನಮ್ಮಾಫೀಸಿನ ಸಿಬ್ಬಂದಿಯೊಬ್ಬರು ಕಾಲಮೇಲೆ ಕಾಲು ಹಾಕಿ, ಒಂದು ಭಾಗವನ್ನು ಒಂಚೂರು ಎತ್ತಿ, ಒಂಥರಾ ಭಂಗಿಯಲ್ಲಿ ಕುರ್ಚಿಯಲ್ಲಿ ಕುಳಿತಿದ್ದರು. ಇವರ ಭಂಗಿ ನೋಡಿ ದುರ್ನಾತಕ್ಕೆ ಕಾರಣ ಕಂಡು ಹಿಡೆದೆ. ನಕ್ಕುಬಿಟ್ಟರೆ ಅವರಿಗೆ ಅವಮಾನವಾದೀತೆಂದು ಆಡಲೂ ಆಗದೆ, ಅನುಭವಿಸಲೂ (ವಾಸನೆಯನ್ನು) ಆಗದೇ ಕುಳಿತಿದ್ದೆ. ನಿಮಗೂ ಈಗ ಕಾರಣ ಗೊತ್ತಾಗಿರಬಹುದು. ಸುಸಂಸ್ಕೃತಿಯಿಂದ ಮಂಡಿಸುವುದಾದರೆ ಅಪಾನವಾಯು ಅಥವಾ ಅಧೋವಾಯು ಹೊರಡುತ್ತಿತ್ತು. ಸಮ್ಮನೆ ನೇರವಾಗಿ ಹೇಳುವುದಾದರೆ ಹೂಸು ಬಿಡುತ್ತಿದ್ದರು.

ತಕ್ಷಣ ಅನ್‌ಲೈನ್ ನಿಘಂಟಿಗೆ ಹೋಗಿ ಹೂಸು ಕೊಟ್ಟು (ಬಿಟ್ಟು?) ನೋಡಿದೆ. "ದೇಹಗತವಾದ ಐದು ಬಗೆಯ ಪ್ರಾಣವಾಯುಗಳಲ್ಲಿ ಒಂದು, ಗುದಸ್ಥಾನದ ವಾಯು, ಅಪಾನವಾಯು, ಅಧೋವಾಯು" ಎಂಬೆಲ್ಲ ಸಮಾನಾರ್ಥಕ ಶಬ್ದಗಳು ಬಿಚ್ಚಿಕೊಂಡವು. ಇಷ್ಟರಲ್ಲಿ ಇದಕ್ಕೆ ಸಂಬಂಧಿಸಿದ ಅನುಭವಗಳು, ಗಾದೆಗಳು, ಜೋಕುಗಳು ಪುಂಖಾನುಪುಂಖಾನುವಾಗಿ ಮನದಲ್ಲಿ ಹರಡಿ ಬ್ಲಾಗಿಸಬೇಕೆಂಬ ತುಡಿತ ಒದ್ದುಕೊಂಡು ಬಂತು. ನಮ್ಮೂರಲ್ಲಿ ಸುರಿದ ಜಡಿಮಳೆಯ ಬಗ್ಗೆ ಬರಯೋಣ ಎಂದು ಒಂದು ತಿಂಗಳಿಂದಲೇ ಪ್ಲಾನು ಹಾಕುತ್ತಿದ್ದ ನಾನು ಸಡನ್ನಾಗಿ ವಿಷಯಾಂತರಿಸಿ ಅಪಾನವಾಯು ಬಗ್ಗೆ ಬರೆಯ ಹೊರಟಿರುವೆ. ನಿಮಗೆ ಛೀ..., ಅಸಂಹ್ಯ....., ಗಲೀಜು... ಹೇಸಿಗೆ ಎಂದೆಲ್ಲ ಅನಿಸುತ್ತದೆಯೇನೋ....? ಆದರೆ ನಾನೇನೂ ಮಾಡುವಂತಿಲ್ಲ. ಇದು ಸ್ವಲ್ಪ ನಾತಮಯ ವಿಷಯವೇ. ನೀವು ಬೇಕಾದರೆ ಮೂಗು ಮುಚ್ಚಿಕೊಂಡೇ ಓದಿ.

ಹಾಗೇ ನೋಡಿದರೆ ನಾನು ಹುಟ್ಟಿದ ಮತ್ತು ಮೆಟ್ಟಿದ ಎರಡೂ ಮನೆಗಳೂ ಸಹ 'ಸೌಂಡ್' ಫ್ಯಾಮಿಲಿಗಳೇ. ಚಿಕ್ಕವರಿದ್ದಾಗ ಅಪ್ಪನ ಹೂಸಿನ ಶಬ್ದದೊಂದಿಗೇ ಬೆಳೆದವರು ನಾವು. ಮನೆಯಲ್ಲಿ ಯಾರಾದರೂ ನೆಂಟರಿದ್ದರೆ ಅದರ ಭರಾಟೆಗೊಂದಿಷ್ಟು ಕಡಿವಾಣ ಇರುತ್ತಿದ್ದಾದರೂ; ಮಿಕ್ಕಂತೆ, ಯಜಮಾನನೆಂಬ ಗತ್ತಿನೊಂದಿಗೆ ಭಯಂಕರವಾದ ಡೊಂರಂಕ್, ಡು...ರ್ರಂಕ್ ಶಬ್ದ ತಥಾನುಗತವಾಗಿ ಕೇಳಿಬರುತ್ತಿತ್ತು. ನಾವು ಮುಖಮುಖ ನೋಡಿ (ಸದ್ದಿಲ್ಲದೆ) ನಗುತ್ತಿದ್ದೆವು. ಸತ್ಯ ಹೇಳಬೇಕೆಂದರೆ, ಕಕ್ಕುಸಿಲ್ಲದ ಆ ಕಾಲದಲ್ಲಿ ಬಹಿರ್ದೆಸೆಗೆ ಗುಡ್ಡೆಗೆ ಓಡುತ್ತಿದ್ದ ನಾವು, ಅರ್ಜೆಂಟ್ ಆದಾಗೆಲ್ಲ, ಅಪ್ಪನ ಮಟ್ಟದಲ್ಲಿ ಢರುಂಕ್ ಢುರುಂಕ್ ಅಲ್ಲವಾದರೂ, ಪುಯಿಂಕ್, ಕುಯಿಂಕ್ ಎಂಬ ಸದ್ದು ಹೊರಡಿಸಿಕೊಂಡು ಓಡುತ್ತಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.

ಅವ್ವನಿಗೋ, ಅಪ್ಪನ ಈ ರೀತಿ ಅವಮರ್ಯಾದೆ ಅನಿಸುತ್ತಿದ್ದು, ಸಿಡಿಮಿಡಿ ಅನ್ನುತ್ತಿದ್ದರು. ಒಮ್ಮೊಮ್ಮೆ ಪರಮೋಶಿಯಿಂದ ಅವರ ದೇಹದಿಂದಲೂ ನಿಯಂತ್ರಣ ತಪ್ಪಿ ಹೊರಟು ಬಿಡುತ್ತಿತ್ತು. ಅಪ್ಪನಿಗಿಂತ ಹೆಚ್ಚು ಸಲಿಗೆ ಅವ್ವನ ಬಳಿ. ನಾವೆಲ್ಲ ಜೋರಾಗೇ ನಕ್ಕರೆ, ನಮ್ಮನ್ನೆಲ್ಲ ಬಯ್ದು- ಜಾಡಿಸಿ, 'ಹೂಸಿಗೆ ನಗುವವರು ಹೂಸಿಂದ ಕಡೆ' ಎಂಬ ಅವರವ್ವನ ಗಾದೆಯನ್ನು ಉಲ್ಲೇಖಿಸಿ ನಮ್ಮನ್ನು ಹೂಸಿಗಿಂತ ಕಡೆಯಾಗಿಸಲು ಪ್ರಯತ್ನಿಸುತ್ತಿದ್ದರು.

ಈ ನನ್ನ ಶ್ರೀಪತಿಯಂತೂ ಲೈಸನ್ಸೇ ಇಲ್ಲದವರಂತೆ ಬಿಡುತ್ತಾರೆ. (ಒಮ್ಮೊಮ್ಮೆ ಅತ್ತೆಮ್ಮನೂ ಇವರಿಗೆ ಸ್ಫರ್ಧೆಯೊಡ್ಡಿ ಜುಗಲ್ಬಂದಿ ಏರ್ಪಡುವುದಿದೆ) ಯಾರಾದರೂ ಹೊಸಬರೆದುರು ಇವರ ಸೌಂಡ್ ಹೊರಟರೆ ನಂಗಂತೂ ಒಂಥರಾ ಆಗೇ ಆಗುತ್ತೆ. ಒಂದ್ಸಾರಿ ಫ್ರೆಂಡ್ ಮನೆಗೆ ಹೋಗಿದ್ದೆವು. ಊಟವೆಲ್ಲ ಮುಗಿಸಿ ಬೀಳ್ಕೊಡುಗೆ ಸಂದರ್ಭ. ಕಾರೇರಲು ನಿಂತಿದ್ದಾಗ ಇವರ ಸೌಂಡ್ ಹೊರಟಿತು. ಸ್ವಲ್ಪವಾದರೂ ಕಂಟ್ರೋಲ್ ಮಾಡಲು ನೋಡ್ತಾರಾ ಮಹರಾಯ, ಕೆಟ್ಟವಾಯುವನ್ನು ಎಗ್ಗಿಲ್ಲದೆ ಹೊರಹಾಕುತ್ತಿದ್ದರು. ದೊಡ್ಡವರೆಲ್ಲ ನಿರ್ಲಕ್ಷಿಸಿದಂತೆ ಮಾಡಿದರೂ, ಅಲ್ಲಿದ್ದ ಮಕ್ಕಳು ಕೇಳ್ತಾವಾ? ಕಿಸಿಕಿಸಿ... ಪಿಸಿಪಿಸಿ.. ಅನ್ನುತ್ತಾ ಬಾಯಿಗೆ ಕೈಹಿಡಿದು ದೂರ ಓಡಿದವು. ಮನೆಗೆ ಬಂದಮೇಲೆ ಪಿರಿಪಿರಿ ಮಾಡಿದೆ. ಎಂಥ ನೀವು, ಮಕ್ಕಳೆದುರೆಲ್ಲಾ ಎಂಬ ಆಕ್ಷೇಪ ವ್ಯಕ್ತಪಡಿಸಿದರೆ ಕ್ಯಾರೇ ಇಲ್ಲದ ಅವರು ಅದರಲ್ಲೇನಿದೆ, ಎಲ್ಲರೂ ಬಿಡುತ್ತಾರೆ, ಇಟ್ಸ್ ಹೆಲ್ದೀ.. ನನ್ನ ಆಕ್ಷೇಪಣೆಯನ್ನು ಚಿಲ್ಲರೆ ಮಾಡಿಬಿಟ್ಟರು.

ನಮ್ಮೂರಲ್ಲೊಬ್ಬ ಅಪ್ಪಯ್ಯಣ್ಣ ಇದ್ದರು. ಈಗವರು ದಿವಂಗತ. ಗಾತ್ರದಲ್ಲಿ ಇವರು ಕುಳ್ಳಗೆ ಗುಂಡುಗುಂಡಾಗಿದ್ದರೆ, ಇನ್ನೋರ್ವ ಅಪ್ಪಯ್ಯಣ್ಣ ಸೊಣಕಲಾಗಿದ್ದರು. ಹಾಗಾಗಿ ಬೊಡ್ಡಪ್ಪಯ್ಯಣ್ಣ ಎಂಬ ನಾಮಾಂಕಿತರಾಗಿದ್ದ ಅವರು ಯಾವಾಗಲೂ, ನಗುತ್ತಾ ನಗಿಸುತ್ತಲೇ ಇರುತ್ತಿದ್ದರು. ಪುಟ್ಟ ಮಕ್ಕಳನ್ನು ಕಂಡಾಗೆಲ್ಲ ಇವರದ್ದೊಂದು ತಮಾಷೆ. ಕೈ ಬೆರಳುಗಳನ್ನೆಲ್ಲ ಮಡಿಚಿ "ಅಯ್ಯೋ ಬೆರಳು ಮುದ್ದೆ ಆಯ್ತು, ಬಿಡಿಸಲಾಗುತ್ತಿಲ್ಲ" ಎನ್ನುತ್ತಾ ಒದ್ದಾಡುವಂತೆ ನಾಟಕ ಮಾಡುತ್ತಾ ಮಕ್ಕಳ ಮನದಲ್ಲಿ ಅನುಕಂಪ ಗಿಟ್ಟಿಸುತ್ತಿದ್ದರು. ಪಾಪ ಅನ್ನುತ್ತಾ ನಾವು ಅವರ ಕೈ ಬೆರಳನ್ನು ಇನ್ನಿಲ್ಲದ ಶ್ರದ್ಧೆಯಿಂದ ಬಿಡಿಸುತ್ತಿರುವಾಗ ಬಾಂಬ್ ಸಿಡಿದಂತೆ ಡೊಂಯಿಂಕ್ ಎಂಬ ಸದ್ದಿನೊಂದಿಗೆ ಅವರ ದೇಹದೊಳಗಿನ ವಾಯುಹೊರಡುತ್ತಿತ್ತು. ನಮ್ಮ ಸ್ಥಿತಿ ಕಂಡು ಡೊಳ್ಳೊಟ್ಟೆಯನ್ನು ಕುಲುಕಿಸಿ ನಗುವ ಅವರ ಪರಿಯಿಂದಾಗಿ ತೀವ್ರವಾದ ಚಿತ್ತಕ್ಷೋಭೆಯನ್ನೂ, ವಾಸನೆಯನ್ನೂ ಒಟ್ಟೊಟ್ಟಿಗೆ ಸಹಿಸಲಾಗದೇ ಅವರನ್ನು ಅಲ್ಲೇ ಗುದ್ದಿಗುದ್ದಿ ಮುದ್ದೆ ಮಾಡಬೇಕೆನಿಸುತ್ತಿತ್ತು.

"ವ್ಹಾssssಸ್ದೇವ ಹ್ಹೂಸ್ ಬಿಟ್ಟ, ಊರಿಗೆಲ್ಲ ನಾತ ಕೊಟ್ಟ" ಎನ್ನತ್ತಾ ನಮ್ಮ ಸಹಪಾಠಿ ವಾಸುವನ್ನು ಅಣಕಿಸಿ ಓಡಿದವರ ಗುಂಪಿನಲ್ಲಿ ನಾನು ಇದ್ದೆ. ಆತ ಹೊಡಿತಾನೆಂದು ಬೆದರಿ ಓಡುವ ರಭಸದಲ್ಲಿ ಎಷ್ಟು ಜನ ಹೂಸು ಬಿಡುತ್ತಾ ಓಡಿದ್ದರೋ....? ಆಗಿನ ನಮ್ಮ ಮಂಗಾಟದ ವೇಳೆ ಅವನಿಗೆಷ್ಟು ಹ್ಯುಮಿಲಿಯಶನ್ ಆಗಿರಬೇಡ. ಸಾರಿ ಕಣೋ ವಾಸು. ಕ್ಷಮ್ಸಿ ಬಿಡು. ಹೂಸುವಾಸನೆ ಎಂಬ ಅಕ್ಷರಗಳ ಪುಂಜವನ್ನು 'ಹೂ' ಸುವಾಸನೆ ಹಾಗೂ 'ಹೂಸು' ವಾಸನೆ ಎಂದು ವಿಂಗಡಿಸಿ, ನಮ್ಮದು ಭಾರೀ ಪದ ಸಂಪತ್ತೆಂದು ಬೀಗಿದ್ದೂ ಉಂಟು.

ತುಳುವಿನಲ್ಲೊಂದು ಗಾದೆಯಿದೆ. ಬಾತ್‌ನಾಯೆಗ್ ಪೂತ್‌ನಾತ್ ಆಧಾರೋ. ಅಂದರೆ ಬಾತಿರುವಾತನಿಗೆ ಹೂಸು ಬಿಟ್ಟಷ್ಟೂ ಆರಾಮ ಅಂತ ಅರ್ಥ. ಅದೊಮ್ಮೆ (ಪುರಾತನ ಕಾಲದಲ್ಲಿ) ಯಾರದ್ದೋ ಮನೆಗೆ ನೆಂಟರು ಬಂದಾಗ ಅವರಿಗಾಗಿ ಕೋಳಿ ಸಾರು ರೊಟ್ಟಿಮಾಡಿ ಬಡಿಸಿದರು. ಕೋಳಿ, ರೊಟ್ಟಿ ಸವಿಯುವಾಗ ಕೆಮ್ಮು ಒತ್ತರಿಸಿಕೊಂಡು ಬಂತು. ಶಕ್ತಿಹಾಕಿ ಕೆಮ್ಮುವಾಗ ಒಂದೆರಡೂ ಹೂಸೂ ಹೋಯ್ತು. ಹಾಗಾಗಿ ನೆಂಟರ ಮನೆಯಲ್ಲಿ ಗಮ್ಮತ್ತೇನು ಎಂದು ಪ್ರಶ್ನೆಗೆ, ತುಳುವಿನಲ್ಲಿ "ಕೋರಿಲ ರೊಟ್ಟಿಲ; ತೆಮ್ಮಲ ಪೂಕಿಲ" (ಕೋಳಿ ಮತ್ತು ರೊಟ್ಟಿ, ಕೆಮ್ಮು ಮತ್ತು ....) ಎಂದು ನೀಡಿದ ಉತ್ತರ ಹಾಸ್ಯೋಕ್ತಿಯಾಗಿ ಚಾಲ್ತಿಯಲ್ಲಿದೆ.

ಇನ್ನೊಂದು ಹಳೆಯ ಜೋಕಿದೆ. ಕಚೇರಿಯಲ್ಲಿ ಕುಳಿತಿದ್ದ ಆತನಿಗೆ ಪಾಪ ನಿಯಂತ್ರಿಸಲಾಗದಷ್ಟು ಒತ್ತಿಕೊಂಡು ಬಂದ ವಾಯುವನ್ನು ಶಬ್ದರಹಿತವಾಗಿ ಹೊರಹಾಕಲಾಗಲಿಲ್ಲವಂತೆ. ಹಾಗಾಗಿ 'ಮರ್ಯಾದೆ ಕಾಪಾಡಿಕೊಳ್ಳಲು' ಅದರ ಪುರ್ಕ್ ಪುರ್ಕ್ ಶಬ್ದಕ್ಕೆ ಸರಿ ಎಂಬಂತೆ ಕಾಗದವನ್ನು ಸಶಬ್ದವಾಗಿ ಹರಿದು ಗೆದ್ದೆನೆಂದು ಬೀಗಿದ. ಅಷ್ಟರಲ್ಲಿ ಸಹೋದ್ಯೋಗಿ, ನಿನ್ನ ಐಡಿಯಾವೇನೋ ಚೆನ್ನಾಗಿದೆ, ಆದರೆ ವಾಸನೆ ಮಾತ್ರ ತುಂಬ ಕೆಟ್ಟದಾಗಿದೆ ಎಂದು ಪ್ರತಿಕ್ರಿಯಿಸಿದನಂತೆ!

"ಹೊಟ್ಟೆಯಲ್ಲಿ ಮೇಲ್ಮುಖವಾಗಿ ಚಲಿಸುವ ಗಾಳಿಯನ್ನು ಕೆಳಮುಖವಾಗಿ ತಳ್ಳಲ್ಪಟ್ಟಾಗ ಅದು ಎರಡು ತೆಳುವಾದ ಪದರಗಳ ನಡುವೆ ಹಾದು ಹೋಗುವಾಗ ಉಂಟಾಗುವ ಪುರ್, ಪುಸ್ಕ್, ಫುಯಿಂಕ್, ಟ್ರುರ್ರ್, ಟುರುಕ್, ಢರ್ರ್, ಡುಯಿಂಕ್ ಎಂಬ ಶಬ್ದವನ್ನು ಲೋಕಲ್ ಭಾಷೆಯಲ್ಲಿ 'ಪೂಕಿ' ಎಂದು ಕರೆಯುವರು" ಇದು ಹೂಸೆಸ್ಸೆಮ್ಮೆಸ್ ವ್ಯಾಖ್ಯಾನ. ತುಳುವಿನಲ್ಲಿ ಇದರ ಸಮಾನಾರ್ಥಕ ಶಬ್ದ ಪೂಕಿ. (ಫಾರ್ವರ್ಡಿಗೆ ಥ್ಯಾಂಕ್ಸ್ ಭುವನ್!)

ಇಷ್ಟಕ್ಕೂ, ನಾನೇನೂ ಸಾಚಾ ಅಲ್ಲ. ಆಗೀಗ ಅಚಾತುರ್ಯ ಆಗುವುದಿಲ್ಲ ಎಂದೇನಿಲ್ಲ. ಏಕಾಂತದಲ್ಲಿ ಈ ವಿಚಾರದಲ್ಲಿ ಬಿಂದಾಸ್ ಆಗಿದ್ದರೂ, ಈ ಬಿಂದಾಸ್‌ನಿಂದ ಒಂದೆರಡು ಬಾರಿ ಗೆಳತಿಯರಿಗೆ ಸಿಕ್ಕಿಬಿದ್ದು, ಬಿದ್ದು ಬಿದ್ದು ನಕ್ಕದ್ದೂ ಇದೆ. ಎಷ್ಟೇ ಸಂಸ್ಕಾರವಂತರೂ, ಸಭ್ಯರಾಗಿದ್ದರೂ ಸಹ ಒಮ್ಮೆಯೂ ಅಧೋವಾಯು ಹೊರಡಿಸಿಯೇ ಇಲ್ಲ ಎಂದರೆ ಅದು ಅಪ್ಪಟ ಆತ್ಮವಂಚನೆಯೇ ಸರಿ!

ಮಂಗಳವಾರ, ಮಾರ್ಚ್ 2

ಪುತ್ರನಿಗೆ ಪತ್ರ

(ಇದು ಐರಿಷ್ ತಾಯಿಯೊಬ್ಬಾಕೆ ತನ್ನ ಮಗನಿಗೆ ಬರೆದ ಪತ್ರದ ಪ್ರತಿಯಂತೆ. ನನ್ನ ಗೆಳತಿಗೆ ಬಂದ ಫಾರ್ವರ್ಡನ್ನು ಆಕೆ ನನಗೆ ತುಂಬ ದಿನದ ಹಿಂದೆ ಫಾರ್ವರ್ಡ್ ಮಾಡಿದ್ದಳು. ಅದನ್ನು ಕನ್ನಡೀಕರಿಸಿ ಇಲ್ಲಿರಿಸಿದ್ದೇನೆ. ನೀವೂ ಓದಿ ಎಂಜಾಯ್ ಮಾಡಿ!!)


ಪ್ರೀತಿಯ ಮಗನೇ...

ನಾನಿನ್ನೂ ಬದುಕಿದ್ದೇನೆ ಎಂದು ತಿಳಿಸಲು ಕೆಲವು ಸಾಲುಗಳನ್ನು ಇಲ್ಲಿ ಬರೆಯುತ್ತಿದ್ದೇನೆ. ನಾವೆಲ್ಲರೂ ಇಲ್ಲಿ ಚೆನ್ನಾಗಿದ್ದೇವೆ. ನಾನು ಈ ಪತ್ರವನ್ನು ತುಂಬಾ ನಿಧಾನವಾಗಿ ಬರೆಯುತ್ತಿದ್ದೇನೆ. ಏಕೆಂದರೆ, ನಿನಗೆ ವೇಗವಾಗಿ ಓದಲು ಆಗದು ಎಂಬುದು ನನಗೆ ಚೆನ್ನಾಗಿ ತಿಳಿದಿದೆ.


ನಾವೀಗ ಮನೆ ಬದಲಾಯಿಸಿದ್ದೇವೆ. ನೀನು ಮನೆಗೆ ಬಂದಾಗ ನಮ್ಮ ಹೊಸಮನೆಯನ್ನು ಗುರುತಿಸಲಾರೆ. ‘ನಿಮ್ಮ ಮನೆಯ 20 ಕಿ.ಮೀ ಅಂತರದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ’ ಎಂಬುದನ್ನು ನಿನ್ನ ತಂದೆ ಪತ್ರಿಕೆಯಲ್ಲಿ ಓದಿದ್ದಾರೆ. ಹಾಗಾಗಿ ಇದರಿಂದ ಪಾರಾಗಲು ನಾವು ಮನೆ ಬದಲಾಯಿಸಿದೆವು. ನಾನೀಗ ನಮ್ಮ ಹೊಸ ಮನೆಯ ವಿಳಾಸವನ್ನು ನಿನಗೆ ನೀಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಇಲ್ಲಿ ವಾಸವಾಗಿದ್ದ ಐರಿಷ್ ಕುಟುಂಬವು ಬೇರೆ ನಿವಾಸಕ್ಕೆ ತೆರಳುವಾಗ ಈ ಮನೆಯ ನಂಬ್ರ ಹಾಗೂ ವಿಳಾಸವನ್ನು ತಮ್ಮ ಜತೆಗೇ ಒಯ್ದಿದೆ. ಹಾಗಾಗಿ ಅವರು ತಮ್ಮ ಹೊಸ ವಾಸ್ತವ್ಯದಲ್ಲಿ ತಮ್ಮ ವಿಳಾಸವನ್ನು ಬದಲಿಸುವ ಅಗತ್ಯವಿಲ್ಲವಂತೆ.


ನಮ್ಮ ಈಗಿನ ಹೊಸ ಮನೆ ನಿಜವಾಗಿಯೂ ಚೆನ್ನಾಗಿದೆ. ಇಲ್ಲಿ ನಮಗೆ ವಾಷಿಂಗ್ ಮೆಷಿನ್ ಸಹ ಇದೆ. ಅದು ಚೆನ್ನಾಗಿ ಕೆಲಸಮಾಡುತ್ತದೆಯೇ ಎಂಬುದನ್ನು ನನಗೆ ಹೇಳಲಾಗುತ್ತಿಲ್ಲ. ಕಳೆದ ವಾರ ಒಂದು ಲೋಡ್ ಬಟ್ಟೆ ಹಾಕಿ ಚೈನ್ ಎಳೆದೆ. ಆ ಬಳಿಕ ಅದು ಕಾಣುತ್ತಲೇ ಇಲ್ಲ.


ನಿನ್ನ ತಂದೆಗೆ ಇಲ್ಲೀಗ ಉತ್ತಮವಾದ ಉದ್ಯೋಗ ದೊರೆತಿದೆ. ಹಾಲಿ ಅವರ ಕೆಳಗೆ 500 ಮಂದಿ ಇದ್ದಾರೆ. ಅವರಿಗೆ ಸ್ಮಶಾನದಲ್ಲಿ ಹುಲ್ಲು ಕತ್ತರಿಸುವ ಕೆಲಸ.


ನಿನ್ನ ಸಹೋದರಿ ಮೇರಿ ಇಂದು ಮುಂಜಾನೆ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ. ಆದರೆ ಅದು ಹೆಣ್ಣೋ ಅಥವಾ ಗಂಡೋ ಎಂಬುದು ನನಗೆ ತಿಳಿದಿಲ್ಲದ ಕಾರಣ ನೀನು ಆಂಟಿಯೋ ಇಲ್ಲ ಅಂಕಲ್ಲೋ ಎಂಬುದಾಗಿ ನನಗೆ ಹೇಳಲಾಗುತ್ತಿಲ್ಲ.


ಕಳೆದವಾರ ನಿನ್ನ ಚಿಕ್ಕಪ್ಪ ಪ್ಯಾಟ್ರಿಕ್ ಡಬ್ಲಿನ್ ಬ್ರಿವರಿಯ ವಿಸ್ಕಿಯ ಕೊಳಗದಲ್ಲಿ ಮುಳುಗಿದ್ದರು. ಅವರ ಕೆಲವು ಸಹೋದ್ಯೋಗಿಗಳು ಅವರನ್ನು ಉಳಿಸಲು ಪ್ರಯತ್ನಿಸಿದರಾದರೂ, ಅವರೊಂದಿಗೆ ದಿಟ್ಟತನದಿಂದ ಹೋರಾಡಿದ ಚಿಕ್ಕಪ್ಪ ವೀರ ಮರಣವನ್ನಪ್ಪಿದ್ದಾರೆ. ಫ್ಯಾಕ್ಟರಿಯವರು ಶವಸಂಸ್ಕಾರ ಮಾಡಿದ್ದು, ಬೆಂಕಿ ನಂದಲು ಮೂರು ದಿವಸ ತಗುಲಿತು.


ನಿನ್ನ ಕಸಿನ್ ಸೀಮಸ್‌ ಬೈಕ್ ಚಲಾಯಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ ಎಂಬುದು ವಿಷಾದನೀಯ ವಿಚಾರ. ಆತನ ಮೇಲೆ ಮಾದಕ ದ್ರವ್ಯ ಸಾಗಾಟದ ಆಪಾದನೆ ಹೊರಿಸಲಾಗಿದೆ.


ಗುರುವಾರ ನಾನು ವೈದ್ಯರನ್ನು ಕಾಣಲು ಹೋಗಿದ್ದೆ. ನಿನ್ನ ತಂದೆಯೂ ನನ್ನೊಂದಿಗಿದ್ದರು. ವೈದ್ಯರು ನನ್ನ ಬಾಯಿಗೊಂದು ಚಿಕ್ಕ ಟ್ಯೂಬ್ ಹಾಕಿ ಹತ್ತು ನಿಮಿಷ ಮಾತನಾಡಬಾರದೆಂದರು. ಆ ಟ್ಯೂಬ್ ಖರೀದಿಸಲು ನಿನ್ನ ತಂದೆ ಉತ್ಸಾಹ ತೋರಿದರು.


ಇಲ್ಲಿನ ಹವಾಮಾನವು ಕೆಟ್ಟದಾಗೇನೂ ಇಲ್ಲ. ವಾರದಲ್ಲಿ ಬರಿಯ ಎರಡು ಸರ್ತಿಮಾತ್ರ ಮಳೆಯಾಗಿದೆ. ಮೊದಲಿಗೆ ವಾರದ ಮೊದಲಿನ ಮೂರುದಿನ ಮಳೆ ಸುರಿದರೆ, ಬಳಿಕ ನಂತರದ ನಾಲ್ಕುದಿನ ಮಳೆ ಸುರಿಯಿತು. ಸೋಮವಾರ ಇಲ್ಲಿ ಬಲವಾದ ಗಾಳಿ ಬೀಸಿದ್ದು, ಕೋಳಿಯೊಂದು ಒಂದೇ ತತ್ತಿಯನ್ನು ನಾಲ್ಕು ಬಾರಿ ಇಟ್ಟಿತು.


ನೀನು ಕಳುಹಿಸಬೇಕು ಎಂದು ಹೇಳಿದ್ದ ಕೋಟ್ ಕಳುಹಿಸಿದ್ದೇವೆ. ಅಂಚೆಯಲ್ಲಿ ಕಳುಹಿಸುವ ವೇಳೆ ಕೋಟಿನಲ್ಲಿ ಬಟನ್ ಇದ್ದರೆ, ಅದು ತುಂಬ ಭಾರವಾಗುತ್ತದೆ ಎಂಬುದಾಗಿ ನಿನ್ನ ಸ್ಟಾನ್ಲಿ ಅಂಕಲ್ ಹೇಳಿದರು. ಹಾಗಾಗಿ ನಾವು ಬಟನ್‌ಗಳನ್ನು ಕತ್ತರಿಸಿ ಅದರ ಕಿಸೆಯಲ್ಲಿ ಇರಿಸಿದ್ದೇವೆ.


ನಿನ್ನೆ ಜಾನ್ ಕಾರಿನ ಕೀಯನ್ನು ಕಾರಿನೊಳಗೇ ಬಿಟ್ಟಿದ್ದ. ಇದರಿಂದಾಗಿ ನಾನು ಮತ್ತು ನಿನ್ನ ತಂದೆ ಕಾರಿನೊಳಗೇ ಬಂಧಿಯಾದೆವು. ಆತನಿಗೆ ಕಾರಿನ ಬಾಗಿಲು ತೆರೆದು ನಮ್ಮನ್ನು ಹೊರತರಲು ಸುಮಾರು ಎರಡು ಗಂಟೆ ತಗುಲಿತು. ಇದು ನಮಗೆ ನಿಜವಾಗಿಯೂ ಆತಂಕ ಉಂಟುಮಾಡಿತ್ತು.


ಟ್ರಕ್ಕಿನಲ್ಲಿ ಸಾಗುತ್ತಿದ್ದ ನಿನ್ನ ಮೂವರು ಸ್ನೇಹಿತರು ನಿನ್ನೆ ಸೇತುವೆಯಿಂದ ಕೆಳಕ್ಕುರುಳಿದ್ದಾರೆ. ರಾಲ್ಫ್ ಗಾಡಿ ಚಲಾಯಿಸುತ್ತಿದ್ದ. ಆತ ಕಿಟಿಕಿ ಮೂಲಕ ಹೊರಬಂದು ಈಜಿ ಸುರಕ್ಷಿತವಾಗಿ ದಡ ಸೇರಿದ್ದಾನೆ. ಇನ್ನಿಬ್ಬರು ಸ್ನೇಹಿತರು ಹಿಂದೆ ಕುಳಿತಿದ್ದರು. ಅವರಿಬ್ಬರಿಗೆ ಕಿಟಿಕಿ ಪತ್ತೆ ಮಾಡಲು ಸಾಧ್ಯವಾಗದ ಕಾರಣ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲು ನನಗೆ ದುಃಖವಾಗುತ್ತಿದೆ.


ಇನ್ನು ಹೆಚ್ಚೇನು ವೀಶೇಷವಿಲ್ಲ. ಈ ಸರ್ತಿ ಇಲ್ಲಿ ಹೆಚ್ಚೇನೂ ಸಂಭವಿಸಿಲ್ಲದ ಕಾರಣ ತುಂಬ ಬರೆಯಲು ಏನಿಲ್ಲ.


ಇತೀ ಆಶೀರ್ವಾದಗಳೊಂದಿಗೆ,

ನಿನ್ನ ಪ್ರೀತಿಯ ತಾಯಿ.


ವಿ.ಸೂ: ನಾನು ನಿನಗೆ ಸ್ವಲ್ಪ ಹಣವನ್ನು ಕಳುಹಿಸಬೇಕೆಂದಿದ್ದೆ. ಆದರೆ ನಾನು ಇದೀಗಾಗಲೇ ಲಕೋಟೆಯನ್ನು ಮುಚ್ಚಿಬಿಟ್ಟಿದ್ದೇನೆ, ಕ್ಷಮಿಸು.

ಮಂಗಳವಾರ, ಫೆಬ್ರವರಿ 9

ಟೆನ್ಷನ್ ಗಂಡನ ರಸ್ತೆ ಸುರಕ್ಷೆ!

ತುಂಬ ದಿನವಾಯ್ತು ಬ್ಲಾಗಿಸಿ. ಹಂದಿ ಜ್ವರದ ಬಗ್ಗೆ ಬರೆದ ಮೇಲೆ ಮತ್ತೇನು ಬರ್ದಿಲ್ಲ. ಇವ್ಳು ಹಂದಿ ಜ್ವರ ಹಿಡಿದು ಹೋಗೇ ಬಿಟ್ಲಾ ಅಂತ ತಿಳ್ಕೊಂಡ್ರೇನೋ. ಕೆಮ್ಮು-ದಮ್ಮು- ಜ್ವರ ಸೇರಿದಂತೆ ಎಚ್1ಎನ್1ನ ಎಲ್ಲಾ ಲಕ್ಷಣಗಳು ಕಾಡಿದ್ದರೂ ದುರಾದೃಷ್ಟವಶಾತ್ ಹಾಗಾಗಲಿಲ್ಲ. ಬದಲಿಗೆ ನಂಗೆ ಮದ್ವೆ ಆಯ್ತು!

ನಾನು ಪರರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಕಚೇರಿಗೆ ರಾಜೀನಾಮೆ ನೀಡಿ, ಪ್ರೀತಿಯ ಸಹೋದ್ಯೋಗಿಗಳು "ಪಾಪ, ಮದ್ವೆ ಆಗ್ತಿದ್ದಾರೆ" ಎನ್ನುತ್ತಾ ಬೀಳ್ಕೊಟ್ಟ ಬಳಿಕ, ಸ್ನೇಹಿತೆ ಶಾಂಭವಿ ತೋರಿಸಿದ ವರನನ್ನು ಆರ್ಯಸಮಾಜದಲ್ಲಿ ಗುರುಹಿರಿಯರಾದಿ, ಕೈಬೆರಳೆಣಿಕೆಯ ಸ್ನೇಹಿತರು - ಬಂಧುಗಳ ಸಮಕ್ಷಮದಲ್ಲಿ ಅಗ್ನಿಸಾಕ್ಷಿಯಾಗಿ ವರಿಸಿ, ಸಂಸಾರ ಸಾಗರಕ್ಕೆ ಧುಮುಕಿದೆ (ಅಥವಾ ಉಳಿದವರು ತಳ್ಳಿ ಬಿಟ್ಟರು).

ಅಗತ್ಯಕ್ಕಿಂತ ಹೆಚ್ಚು ಸಜ್ಜನ ನನಗಂಡ. ಜತೆಗೆ ಒಂದಿಷ್ಟು ಮೊಂಡ. ಸತ್ಯ, ನಿಷ್ಠೆ, ಪ್ರಾಮಾಣಿಕತೆ ಎಂಬ ಭಜನೆ ಮಾಡುತ್ತಾ, ಎಲ್ಲರಿಂದಲೂ ಅದನ್ನೇ ಬಯಸುವ ಈಡಿಯೆಟ್(Idiot in capital letters ಎಂಬುದು ಅವರ ಡಯಲಾಗ್. ಆದರೆ ನಾನು ಒಂದಿಷ್ಟು ಕರುಣೆಯೊಂದಿಗೆ sweet idiot ಅಂತೇನೆ). ಕಪಾಟುಗಟ್ಟಲೆ ಪುಸ್ತಕಗಳನ್ನು(ಆಂಗ್ಲ ಸಾಹಿತ್ಯ) ಓದಿ ಅದುವೇ ಜೀವನ ಎಂಬ ಭ್ರಾಮಕ ಲೋಕದಲ್ಲಿ ತೇಲುತ್ತಿರುವ ಈ ನನ್ನ ಗಂಡನನ್ನು ವಾಸ್ತವ ಲೋಕಕ್ಕೆ ತರುವುದು ಹೇಗಪ್ಪಾ ಎಂಬ ಚಿಂತೆಯಿಂದಲೇ ಸಪ್ತಪದಿ ತುಳಿದಿದ್ದೆ.
ಮದುವೆಯಾಗಿ ಹದಿನೈದು ದಿನವಾಗುತ್ತಲೇ ನವದಂಪತಿಗಳೆಂಬ ಹಂತ ದಾಟಿ, ನುರಿತ ಗಂಡಹೆಂಡಿರಂತೆ ಜಗಳವಾಡುವ ಹಂತಕ್ಕೆ ತಲುಪಿದ್ದೆವು. ಈಗ ಸುಮಾರು ಒಂದೂವರೆ ತಿಂಗಳಾಯಿತು ಬಿಡಿ. ಪ್ರೀತಿಯಷ್ಟೆ ಸರಾಗವಾಗಿ ಕೋಪವನ್ನು ತೋರಿಸಿಕೊಳ್ಳುವ ಮಟ್ಟಕ್ಕೆ ಬಂದಿದ್ದೇವೆ.

ನಮ್ಮೊಳಗೆ ಜಗಳ ಹುಟ್ಟಲು ಮುಖ್ಯ ಕಾರಣ ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸದೇ ಇರುವುದು, ದೇಶದಲ್ಲಿನ ಭ್ರಷ್ಟಾಚಾರ, ಸಮಾಜದಲ್ಲಿನ ಅನೀತಿ, ಜನರ ನಿಷ್ಕಾಳಜಿ ಇತ್ಯಾದಿ! ಅದೊಂದು ದಿನ ಬೆಳ್ಳಂಬೆಳಗ್ಗೆ ಎದ್ದು, ದಿನಪತ್ರಿಕೆ ಕೈಲಿ ಹಿಡಿದು ಸರ್ವಚಿಂತೆಯನ್ನು ಮುಖದ ಮೇಲಿಟ್ಟು ಕುಳಿತಿದ್ದರು. ಏನಾಯ್ತು ಅಂದೆ. ಇನ್ನು ಐವತ್ತು ವರ್ಷ ಕಳೆದರೆ ಭಾರತ ಇರುವುದಿಲ್ಲ ಅಂದರು. ಹೊಸದಾಗಿ ಮದುವೆಯಾದವರು ನಾವು. ಅದರಲ್ಲೂ ನಮ್ಮದು ವಿಪರೀತ ಲೇಟ್ ಮದುವೆ. ಹೀಗಿರುವಾಗ ಈ ಮನುಷ್ಯ, ನಮ್ಮ ಉಳಿದ ಆಯುಷ್ಯದ ಬಗ್ಗೆ ಚಿಂತಿಸುವುದು ಬಿಟ್ಟು ಇದೇನಿದು, ಎಂಬುದಾಗಿ ಪಿಚ್ಚೆನಿಸಿದ ನಾನು, "ಭಾರತವನ್ನು ನಿಮ್ಮ ತಲೆ ಮೇಲೆ ಹೊತ್ತುಕೊಂಡಿದ್ದೀರಾ? ಇನ್ನು 50 ವರ್ಷದಲ್ಲಿ ನಾವೂ ಇರಲಾರೆವು, ಅದರೊಳಗೆ ಇರುವ ಅಲ್ಪ ಕಾಲವನ್ನು ನೆಮ್ಮದಿಯಿಂದ ಬದುಕುವ ಬಗ್ಗೆ ಚಿಂತಿಸಿ" ಎಂದೆ. ಇದರಿಂದ ಕಿರಿಕಿರಿಗೊಂಡಿದ್ದು ಅವರ ಬಿಳಿಯ ಮುಖ ಕೆಂಪುಬಣ್ಣಕ್ಕೆ ತಿರುಗಿದ್ದರಿಂದಲೇ ತಿಳಿಯುತ್ತಿತ್ತು. ಬಳಿಕ "ಮೈ ವೈಫ್ ಈಸ್ ಆಲ್ಸೋ ನಾಟ್ ಸಫೋರ್ಟಿಂಗ್ ಮೀ" ಅಂತ ಅವರ ಗೆಳೆಯರಿಗೆ ದೂರವಾಣಿ ಮೂಲಕ ದೂರುತ್ತಿದ್ದರು. ನಾವು ಚಿಂತೆ ಮಾಡದಿದ್ದರೆ ಇನ್ಯಾರು ಎಂಬುದು ಅವರ ಕಳಕಳಿ.

ಒತ್ತಡ ಮತ್ತು ಆತಂಕ (Stress and anxiety) ಸಮಸ್ಯೆಯಿಂದ ಬಳಲುತ್ತಿರುವ ನನ್ನ ಪತಿರಾಯ ಯಾರೋ ಮಾಡುವ ತಪ್ಪಿಗಾಗಿ ಆತಂಕ ಪಡುವುದು ನನ್ನನ್ನು ಆತಂಕಕ್ಕೀಡು ಮಾಡುತ್ತದೆ. ಅವರ ಕಾಳಜಿ ಟೂ ಹಂಡ್ರೆಡ್ ಪರ್ಸೆಂಟ್ ಸರಿ. ಇದರಲ್ಲಿ ದೂಸ್ರಾ ಮಾತಿಲ್ಲ. ಆದರೆ, ಸುಧಾರಣಾವಾದಿಯಂತೆ ವರ್ತಿಸುವ ಇವರ ದೊಡ್ಡ ಧ್ವನಿಯ ಆಕ್ಷೇಪದಿಂದ ಕೆರಳಿದವರು ಬಂದು ನಾಲ್ಕು ತದುಕಿದರೆ ಧರ್ಮಕ್ಕೆ ತಿನ್ನಬೇಕಲ್ಲವೇ ಎಂಬುದು ನನ್ನ ಚಿಂತೆ. ಜೀವನದ ವಿವಿಧ ಮಜಲುಗಳಲ್ಲಿ ಅನ್ಯಾಯದ ವಿರುದ್ಧ ಹೋರಾಡಿ ಅನ್ಯಾಯ ಮಾಡಿಸಿಕೊಂಡು, ಹೊಡೆತದ ಮೇಲೆ ಹೊಡೆತ ತಿಂದ ಅನುಭವದ ಬಳಿಕ ವಾಸ್ತವವಾದಿಯಾಗಿರುವವಳು ನಾನು. ಇಂತಹ ನನಗೆ, 'ನಮಗ್ಯಾಕೆ ಇದೆಲ್ಲ; ಬಡವಾ ನೀ ಮಡಗಿದಂತಿರು ಎಂಬಂತೆ ಇರುವಾ' ಎಂಬ ಧೋರಣೆ. ನಿಮಗೆ ಗೊತ್ತಿದ್ದಂತೆ ರಸ್ತೆ ನಿಯಮಗಳನ್ನು ಮುರಿಯುವುದು, ರಾಂಗ್ ಸೈಡಿನಲ್ಲಿ ಬರುವುದು, ಕಿವಿಹರಿದು ಹೋಗುವಂತೆ ಹಾರ್ನ್ ಮಾಡುವುದು ಹೆಚ್ಚಾಗಿ ಬಿಸಿ ರಕ್ತದ ಯುವಕರು. ಯಾರ ಹಿನ್ನೆಲೆ ಹೇಗುಂಟು ಯಾರಿಗೆ ಗೊತ್ತು? ಷರ್ಟಿನೊಳಗಿಂದ ಚೂರಿಯೋ ಪಿಸ್ತೂಲೋ ತೆಗೆದು 'ಡಿಮ್ಮ' ಮಾಡಿ 'ಮುಗಿಸುವ' ಕಾಲವಿದು. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪರಸ್ಪರ ಸ್ಫರ್ಧೆಗೊಡ್ಡಿಕೊಳ್ಳುವ ಬಸ್ಸುಗಳವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಾ ಚೂರಿಹಾಕಿ ಕೊಂದ ಉದಾಹರಣೆಯೂ ಇರುವ ಊರು ನಮ್ಮದು. ಹೀಗಾಗಿ, “ನಿಮಗೇಕೆ ಊರ ಉಸಾಬರಿ? ನೀವು ನಿಮ್ಮಪಾಡಿಗೆ ಇರುವುದನ್ನು ಕಲಿಯಿರಿ” ಎಂಬುದು ನನ್ನ ವಾದ.

ಈ ಮಧ್ಯೆ ಅವರ ಸುರಕ್ಷತಾ ಕ್ರಮಗಳ ಬಗ್ಗೆ ಒಂದಿಷ್ಟು ಹೇಳಿ ಬಿಡುತ್ತೇನೆ. ನಾನು ಮತ್ತು ಶಾಂಭವಿ ಗಾಡಿಯಲ್ಲಿ ಹೋಗುವಾಗೆಲ್ಲ, ಒಂದು ಹತ್ತು ಮೀಟರ್ ದೂರ ಸಾಗುವುದಿದ್ದರೆ, ಮೆಲ್ಲ ರಸ್ತೆಬದಿಯಲ್ಲಿ ರಾಂಗ್ ಸೈಡಿನಲ್ಲಿ ಹೋಗುತ್ತೇವೆ. ಟ್ರಾಫಿಕ್ ಪೊಲೀಸ್ ಸಿಕ್ಕರೆ ಒಂದು ಕಿರುನಗೆ ಬೀರಿ ಮುಂದೆ ಸಾಗುತ್ತಿದ್ದೆವು. ಆದರೆ ಈ ನನ್ನ ಗಂಡ ಮಹಾಶಯ ಮಾತ್ರ ಅದು ಒಂದೇ ಮೀಟರ್ ದೂರವಾಗಿದ್ದರೂ ಸಹ, ಇನ್ನೊಂದು ಸೈಡಿಗೆ ಕಟ್ ಮಾಡಲು ಒಂದು ಫರ್ಲಾಂಗ್ ದೂರ ಹೋಗಿ ರಿಸ್ತೆ ವಿಭಜಕದ ಅಂತ್ಯದಲ್ಲೇ ಗಾಡಿ ತಿರುಗಿಸಿ ಮರಳಿ ಬರುತ್ತಾರೆ. ಅರ್ಧ ಲೀಟರ್ ಪೆಟ್ರೋಲ್ ಮುಗಿಯುತ್ತದೆ ಎಂಬುದು ನನ್ನ ಹಳಹಳಿ. "ನಾನು ಹೀಗೇ ಬದುಕಿದ್ದು, ಇನ್ನೂ ಹೀಗೆ ಬದುಕುವುದು" ಎಂಬುದು ಅವರ ಸಮಜಾಯಿಷಿ.

ಎಡಬದಿಯಲ್ಲೇ ಸಾಗುವ, ಕೆಲವೊಮ್ಮೆ ಪಾದಚಾರಿಗಳನ್ನು ಸವರಿಯೇ ಬಿಡುತ್ತಾರೆ ಎಂಬ ಭಯ ಹುಟ್ಟಿಸುವಂತೆ ಹೋಗುತ್ತಾ, ಏನೇ ಆದರೂ ಯಾರನ್ನೂ ಓವರ್‌ಟೇಕ್ ಮಾಡಲಾರೆ ಎಂಬ ಶಪಥಕ್ಕೆ ಬಿದ್ದವರಂತೆ, ಸಿಟಿಬಸ್ಸುಗಳ, ರಿಕ್ಷಾಗಳ ಹಿಂದೆಯೇ ಹೋಗುತ್ತಾ ಅಸಹನೆ ಹುಟ್ಟಿಸುತ್ತಾರೆ. ಅಡ್ಡ ರಸ್ತೆಗಳಿಂದ ಬಂದು ಸೇರುವವರಿಗೂ ಗಾಡಿನಿಲ್ಲಿಸಿ ಮುಂದೆ ಹೋಗಿ ಅನ್ನುತ್ತಾ ಬ್ಯಾಲೆನ್ಸ್ ಮಾಡಲು ಸರ್ಕಸ್ ಮಾಡುತ್ತಾರೆ. ಹಿಂದಿನವರು ಹಾರ್ನ್ ಹಾಕಿದರೆ ಅದಕ್ಕೂ ಕಿರಿಕಿರಿ. ಅದೊಂದು ಸರ್ತಿ ನಗರ ಪಾಲಿಕೆಯವರು ರಸ್ತೆ ಅಗೆದಿದ್ದರು. ರಸ್ತೆ ಬ್ಲಾಕ್ ಆಗಿದ್ದ ಕಾರಣ ತಿರುಗಿ ಬರುವ ವೇಳೆಗೆ ಬದಿಯಲ್ಲಿದ್ದ ಬೋರ್ಡ್ ಗಮನಕ್ಕೆ ಬಂದಿತ್ತು. ತಪ್ಪು ಬೋರ್ಡ್ ಹಾಕಿ ದಿಕ್ಕು ತಪ್ಪಿಸಿದ್ದ ಆವರಿಗೆ ಬಯ್ಯುವ ರಭಸದಲ್ಲಿದ್ದಾಗ ರಣಗಾತ್ರದ ಬಸ್ಸೊಂದನ್ನು ಕಂಡು ಬೆದರಿ ಗಾಡಿ ನಿಲ್ಲಿಸಿ ಸೈಡ್ ಕೊಡಲು ಅನುವಾದರು. ಆದರೆ ಬಸ್ಸು ಚಲಿಸುತ್ತಲೇ ಇರಲಿಲ್ಲ. ಯಾಕೆಂದು ನೋಡಿದರೆ, ಅದು ನಿಂತಿದ್ದ ಬಸ್ಸು! ಮತ್ತೊಂದು ಸರ್ತಿ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆವು. ಅವರ ಅಂಗಳದಲ್ಲಿ, ಗಾಡಿ ನಿಲ್ಲಿಸಿದ ಬಳಿಕ ಮಲಗಿದ್ದ ನಾಯಿಗೆ ಹಾರ್ನ್ ಹಾಕುತ್ತಿದ್ದರು. ಯಾಕೆ ಹಾರ್ನ್ ಮಾಡುತ್ತೀರಾ ಅಂದರೆ, ಯೂರೋಪಿನ ತುಂಡಿನಂತೆ ಮಾತನಾಡುವ ಅವರು 'ಡಾಗ್ ಡಾಗ್' ಅನ್ನುತ್ತಾ ಮುಖ ನೋಡುತ್ತಾರೆ. ನಗಬೇಕೋ ಅಳಬೇಕೋ?