ಬುಧವಾರ, ಆಗಸ್ಟ್ 12

ಹಂದಿಜ್ವರದಿಂದ ದೂರ ಇರಲು ಹೀಗೆ ಮಾಡಿ

ಇದೇನಿದು ಹಂದಿಜ್ವರಕ್ಕೆ ಬಲಿಯಾಗುವವರ ಸಂಖ್ಯೆ ಕ್ರಿಕೆಟ್ ಸ್ಕೋರ್ ತರಹ ಪ್ರಕಟವಾಗುತ್ತಿದೆ ಅಂತ ಸಹೋದ್ಯೋಗಿಗಳು ಕಳವಳ ವ್ಯಕ್ತಪಡಿಸಿದ್ದರು ಬೆಳಿಗ್ಗೆ. ಇದು ನಿಜ ಕೂಡ. ಇನ್ನು ಕೆಲವು ದಿನ ಕಳೆದರೆ ಮಾಧ್ಯಮಗಳಲ್ಲಿ 'ಹಂದಿಜ್ವರ: ಇಂದಿನ ಸ್ಕೋರ್' ಎಂಬ ಸುದ್ದಿಗಳು ಪ್ರಕಟವಾದಾವು ಅಂತ ಮತ್ತೊಬ್ಬರು ಸೇರಿಸಿದರು. ಮತ್ತೊಬ್ಬರ ಪ್ರಕಾರ ಇದು ಚುನಾವಣಾ ಫಲಿತಾಂಶದ ಸಂಖ್ಯೆಗಳಂತೆ ಘೋಷಣೆಯಾಗುತ್ತಿದೆ. ಅದೇನೆ ಇರಲಿ ಈ ಮಾರಣಾಂತಿಕ ರೋಗ ಆತಂಕಕಾರಿ ಮಾತ್ರ ನಿಜ.

ಈ ಸಂದೇಶವನ್ನು ನೀವು ಕಾಳಜಿವಹಿಸುವ ಎಲ್ಲರಿಗೂ ಕಳುಹಿಸಿ ಎಂಬ ಪೀಠಿಕೆಯೊಂದಿಗೆ ಇದ್ದ ಈ ಸಂದೇಶ ಗೆಳತಿ ಲಲಿತಳ ಮೊಬೈಲಿನಿಂದ ನಿನ್ನೆ ಮಧ್ಯರಾತ್ರಿ ನನ್ನ ಮೊಬೈಲಿಗೆ ಬಂದಿಳಿದಿತ್ತು. ನನ್ನ ಕಾಳಜಿಯ ಪಟ್ಟಿ ದೊಡ್ಡದೇ ಇದೆ. ಇದರಲ್ಲಿ ನೀವೂ ಸೇರಿರುವ ಕಾರಣ ಮತ್ತು ನಿಮ್ಮ ನಂಬರ್ ನನ್ನ ಬಳಿ ಇಲ್ಲದ ಕಾರಣ ಇದನ್ನು ಇಲ್ಲಿ ಹಂಚಿಕೊಳ್ಳೋಣ ಎಂದೆನಿಸಿತು. ಇದು ನಿಮಗೂ ಬಂದಿರಬಹುದು. ಆದರೂ ಒಮ್ಮೆ ಕಣ್ಣು ಹಾಯಿಸಿಬಿಡಿ.

ಗೃಹಬಳಕೆಯ ವಸ್ತುಗಳಿಂದ ಹಂದಿಜ್ವರ ಅಲಿಯಾಸ್ ಸ್ವೈನ್ ಫ್ಲೂ ಅಲಿಯಾಸ್ ಎಚ್1ಎನ್1 ಇನ್‌ಫ್ಲೂಯೆಂಜಾ ಎಂಬ ಮಹಾಮಾರಿ ಹತ್ತಿರ ಸೋಂಕದಂತೆ ದೂರವಿರಿಸಬಹುದು.

* ನಿಮ್ಮ ಕರವಸ್ತ್ರದಲ್ಲಿ ಒಂದು ಹನಿ ನೀಲಗಿರಿ ತೈಲವನ್ನು ಚಿಮುಕಿಸಿಕೊಳ್ಳಿ.
* ಒಂದು ಸೆಕೆಂಡುಗಳ ಕಾಲ ಲವಂಗದ ತೈಲವನ್ನು ಇನ್‌ಹೆಲ್ ಮಾಡಿ.
* ಲವಂಗವನ್ನು ಬಾಯಲ್ಲಿರಿಸಿಕೊಂಡು ನಿಧಾನಕ್ಕೆ ಅದರ ರಸವನ್ನು ನುಂಗಿ (ದಿನಕ್ಕೊಂದು)
* ಒಂದರಿಂದ ಐದು ಗ್ರಾಂಗಳಷ್ಟು ಹಸಿ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಶುಂಠಿಯನ್ನು ತಿನ್ನಿ
* ಬಿಸಿ ಹಾಲಿನಲ್ಲಿ ಎರಡು ಗ್ರಾಂ ಅರಸಿನಪುಡಿ ಸೇರಿಸಿ ಕುಡಿಯಿರಿ
* ವಿಟಮಿನ್ ಸಿ ಇರುವ ಹಣ್ಣು-ತರಕಾರಿಗಳನ್ನು ಹೇರಳವಾಗಿ ಸೇವಿಸಿ
* ಪ್ರತಿನಿತ್ಯ ತುಳಸಿ ಎಲೆಗಳನ್ನು ಜಗಿದು ತಿನ್ನಿ

ಇದರಿಂದ ಹಂದಿಜ್ವರ ಮಾತ್ರವಲ್ಲ, ಎಲ್ಲಾ ರೀತಿಯ ರೋಗದಿಂದಲೂ ದೂರ ಇರಬಹುದು.

ಈ ರೋಗ ಯಾರಿಗೂ ಸೋಂಕದಿರಲಿ ಮತ್ತು ಸೋಂಕು ತಗುಲಿದವರು ಬೇಗ ಗುಣಮುಖವಾಲಿ ಎಂದು ಹಾರೈಸುತ್ತಾ, ಈ ರೋಗದ ಲಕ್ಷಣ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು 'ವೆಬ್‌ ದುನಿಯಾ' ಕನ್ನಡದಲ್ಲಿ ಪ್ರಕಟವಾದ ಬರಹವನ್ನು ಇಲ್ಲಿ ಎತ್ತಾಕಿದ್ದೇನೆ. ಯಾರಿಗಾದರೂ ಅನುಕೂಲವಾದರೂ ಆಗಬಹುದು.

ಈ ರೋಗದ ಲಕ್ಷಣಗಳೇನು? ಇಲ್ಲಿ ನೋಡೋಣ
ಸ್ವೈನ್ ಫ್ಲೂ ಒಂದು ವೈರಲ್ ಸೋಂಕು ಆಗಿದ್ದು ಅದರ ಸಾಮಾನ್ಯವಾದ ಲಕ್ಷಣಗಳೆಂದರೆ, ಕಟ್ಟಿದ ಮೂಗು ಅಥವಾ ನೆಗಡಿ, ವಾಕರಿಕೆ, ಚಳಿ, ಕೆಮ್ಮು, ಗಂಟಲು ಬಿಗಿತ, ಗಂಟಲು ಕೆರೆತ, ಗಂಟಲೂತ, ಮೈಕೈನೋವು, ನಿಶ್ಶಕ್ತಿ ಮತ್ತು ಸುಸ್ತು.

ಇದಲ್ಲದೆ, ಉಸಿರಾಟದ ತೊಂದರೆ ಹಾಗೂ ಭೇದಿಯೂ ಕಾಣಿಸಿಕೊಳ್ಳಬಹುದು.

ಕೆಮ್ಮು, ಸೀನು ಅಥವಾ ಸೋಂಕುಪೀಡಿತ ಸ್ಥಳ ಅಥವಾ ವಸ್ತುಗಳನ್ನು ಮುಟ್ಟಿದ ಬಳಿಕ ನಿಮ್ಮ ಬಾಯಿ ಅಥವಾ ಮೂಗನ್ನು ಮುಟ್ಟುವ ಮೂಲಕ ಸೋಂಕು ಹಬ್ಬುತ್ತದೆ.

ನೀವು ಸೋಂಕು ಪೀಡಿತ ರಾಷ್ಟ್ರಕ್ಕೆ ಭೇಟಿ ನೀಡಿದರೆ ಅಥವಾ ಸೋಂಕು ಪೀಡಿತ ವ್ಯಕ್ತಿಯನ್ನು ಭೇಟಿಯಾದರೆ, ನಿಕಟ ಸಂಪರ್ಕಕ್ಕೆ ಬಂದರೆ ಎಚ್1ಎನ್1 ತಪಾಸಣೆ ಮಾಡಿಸಿಕೊಳ್ಳಿ.

ದೀರ್ಘಕಾಲ ವೈರಲ್ ಸೋಂಕಿನಿಂದ ಬಳಲುತ್ತಿದ್ದರೂ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ನಿರ್ಲಕ್ಷಿಸಬೇಡಿ.

ಮುಂಜಾಗೃತಾ ಕ್ರಮಗಳೇನು?
ಶಾಲಾ ಕಾಲೇಜುಗಳಿಗೆ ತೆರಳುವವರು ಹಾಗೂ ಕೆಲಸಕ್ಕಾಗಿ ಮನೆಯಿಂದ ತೆರಳುವವರಿಗೆ ಅಪಾಯ ಹೆಚ್ಚು. ಹವಾನಿಯಂತ್ರಿತ ಕೊಠಡಿಗಳು ಹಾಗೂ ಮುಚ್ಚಿದ ವಾತಾವರಣದಲ್ಲಿ ಇರುವವರಿಗೂ ತಕ್ಷಣವೇ ರೋಗ ತಗಲುವ ಅಪಾಯ ಹೆಚ್ಚು.

ಬಳಸಿ ಎಸೆಯುವ(ಡಿಸ್ಪೋಸೇಬಲ್) ಟಿಶ್ಯೂಗಳನ್ನೇ ಬಳಸಿ. ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಬಾಯಿ ಹಾಗೂ ಮೂಗನ್ನು ಯಾವಾಗಲೂ ಮುಚ್ಚಿಕೊಳ್ಳಿ. ಎಂಜಲು, ಕಫ ಉಗುಳುವ ವೇಳೆ ಬಳಸಿದ ಟಿಶ್ಯೂ ಎಸೆಯುವ ವೇಳೆ ಅತಿ ಜಾಗರೂಕತೆ ವಹಿಸಿ.

ಟೇಬಲ್ ಟಾಪ್‌ಗಳು, ಟೆಲಿಫೋನ್‌ಗಳು ಹಾಗೂ ಕಂಪ್ಯೂಟರ್‌ಗಳಲ್ಲಿ ಯಾವಾಗಲೂ ಕೆಲವು ವೈರಸ್‌ಗಳಿರುತ್ತವೆ. ಹಾಗಾಗಿ ನಿಮ್ಮ ಕಣ್ಣು, ಮೂಗು ಹಾಗೂ ಬಾಯಿಯನ್ನು ಪದೇಪದೇ ಮುಟ್ಟಿಕೊಳ್ಳಬೇಡಿ.

ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವುದು ಸೋಂಕು ತಡೆಗೆ ಪರಿಣಾಮಕಾರಿ ಮಾರ್ಗ. ಆಲ್ಕೋಹಾಲ್ ಆಧಾರಿತ ಜೆಲ್ ಅಥವಾ ನೊರೆಬೀರುವ ಸ್ಯಾನಿಟೈಸರ್‌ಗಳ ಬಳಕೆ ಈ ವೈರಸ್‌ಗಳನ್ನು ಕೊಲ್ಲಲು ಪರಿಣಾಮಕಾರಿಯಾಗಿದೆ.

ಆಹಾರಪದಾರ್ಥಗಳು
ಈ ರೋಗಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಣವಿಲ್ಲ. ಯಾಕೆಂದರೆ, ಇದು ಆಹಾರ ಸಂಬಂಧೀ ಕಾಯಿಲೆಯಲ್ಲ. ಸೋಂಕು ಪೀಡಿತ ರೋಗಿಗಳು ಕೆಮ್ಮುವ, ಸೀನುವವೇಳೆ ಹರಡುವ ಗಾಳಿಯಲ್ಲಿ ಹಬ್ಬಬಹುದು. ಅಥವಾ ಕೈಗಳಲ್ಲಿರುವ ರೋಗಾಣುಗಳು ಅಥವಾ ಮೇಲ್ಮೈ ಮೂಲಕ ಹಬ್ಬಬಹುದು.
ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತವಾದ ಮಾಸ್ಕ್ ಧರಿಸುವುದೂ ಸಹ ಉತ್ತಮವೇ ಆದರೂ, ಮಾಸ್ಕೊಂದೇ ನಿಮ್ಮನ್ನು ರೋಗದಿಂದ ತಡೆಯದು.

ಸಾಕಷ್ಟು ನೀರು ಸೇವಿಸಿ ಹಾಗೂ ಸಾಕಷ್ಟು ನಿದ್ದೆ ಮಾಡಿ. ನಿದ್ದೆಗೆಡುವುದು ಅನಾರೋಗ್ಯಕರ ಅಭ್ಯಾಸ ಹಾಗೂ ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು.

ರೋಗಪೀಡಿತರ ನಿಕಟ ಸಂಪರ್ಕದಿಂದ ದೂರವಿರಿ. ಶ್ವಾಸಕೋಶದ ಸೋಂಕಿನಿಂದ ಬಳುಲುತ್ತಿರುವವರಿಂದ ಕನಿಷ್ಠ ಮೂರು ಅಡಿಗಳ ದೂರದಲ್ಲಿ ನಿಲ್ಲಿ.

ಮನೆಯೊಳಗೆ ಸೂರ್ಯನ ಕಿರಣಗಳು ಬೀಳುವಂತೆ ಕಿಟಿಕಿ ಬಾಗಿಲುಗಳು ತೆರೆದಿರಲಿ. ಅಡುಗೆ ಮನೆ ಹಾಗೂ ವಿಶ್ರಾಂತಿ ಕೊಠಡಿಗಳು ಸ್ವಚ್ಛವಾಗಿರಲಿ.

ಒಂದು ವೇಳೆ ಇದಾಗಲೇ ಸೋಂಕು ತಗುಲಿದ್ದರೆ,
ಕಾಯಿಲೆ ಸಂಪೂರ್ಣ ಗುಣವಾಗುವ ತನಕ ನೀವು ಕೊಠಡಿಯೊಳಗೆಯೇ ಇರಿ. ಮಾಸ್ಕ್ ಧರಿಸುವುದು ಕಡ್ಡಾಯ.

ಸಾಮಾಜಿಕ ಸಮಾರಂಭಗಳು, ಸಾರ್ವಜನಿಕ ಸ್ಥಳಗಳು ಹಾಗೂ ಕೆಲಸದ ಸ್ಥಳಗಳಿಗೆ ಹೋಗದಿರಿ. ಇದರಿಂದ ಸೋಂಕು ಹಬ್ಬುವುದನ್ನು ತಪ್ಪಿಸಬಹುದಾಗಿದೆ,

ಹಂದಿಜ್ವರವು ಮೊದಲ ಐದು ದಿನಗಳ ಕಾಲ ಅತಿಹೆಚ್ಚು ಸಾಂಕ್ರಾಮಿಕವಾಗಿರುತ್ತದೆ. ಮಕ್ಕಳಾಗಿದ್ದಲ್ಲಿ ಹತ್ತು ದಿನಗಳ ಕಾಲ ರೋಗವು ಸಾಂಕ್ರಾಮಿಕವಾಗಿರುತ್ತದೆ.

ಹೆಲ್ಪ್‌ಲೈನ್‌ ಫೋನ್ ನಂಬರ್‌ಗಳು
ಆಲ್ ಇಂಡಿಯಾ ಉಚಿತ ಎಚ್1ಎನ್1 ಹೆಲ್ಪ್‌ಲೈನ್: 1075 ಅಥವಾ 1800-11-4377
ಬೆಂಗಳೂರು: ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ - 91-80-26632634
ದೆಹಲಿ: ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ: 011-24525211, 23404328, 23365525
ದೀನ್ ದಯಾಳ್ ಆಸ್ಪತ್ರೆ: 011-25125259
ಚೆನ್ನೈ: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ: 044-25912686
ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ: 09442012555
ಕೋಲ್ಕತಾ: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ: 09433392182/09434009077
ಹೈದರಾಬಾದ್: ಆಂಧ್ರ ಪ್ರದೇಶ ಎದೆ ರೋಗಗಳ ಆಸ್ಪತ್ರೆ: 040-23814939
ಮುಂಬೈ: ಕಸ್ತೂರ್ಬಾ ಆಸ್ಪತ್ರೆ: 022-23083901, 23083902, 23083903, 23083904
ಪುಣೆ: ಡಾ| ನಾಯ್ಡು ಸಾಂಕ್ರಾಮಿಕ ರೋಗ ಆಸ್ಪತ್ರೆ - 09923130909

ಶುಕ್ರವಾರ, ಮೇ 29

ಹೊಸಲಂಗದತ್ತ ಕೈಚಾಚಿ ಇದ್ದಲಂಗವನ್ನೂ ಕಳಕೊಂಡರು!

ಭಳಿರೇ ಪರಾಕ್ರಮ ಕಂಠೀರವಾ.......

ಬಲ್ಲಿರೇನಯ್ಯಾ......

ಹ್ಹೋ.....ಹ್ಹೋ.....ಹ್ಹೋ.....ಹ್ಹೋ......ಹ್ಹೋ.....ಹ್ಹೋ........

ಈ್ಹ......ಅಖ್ಹಂಡ್ಹ ಭರತಖಂಡದ ಸಾಮ್ರಾಟನಾರೆಂದು ಕೇಳಿ ಬಲ್ಲಿರೀ....

ಮಣಮಣ ಸಿಂಗ್ ಎಂದು ಕೇಳಿಬಲ್ಲೆವು......

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....

ಇರುವಂತಹಾ ಸ್ಥಳ.....?

ಹೊಸದೆಹಲಿ ಎಂದುಕೊಳ್ಳಬಹುದೂ...

ಬಂದಂತಹಾ ಕಾರ್ಯ....?

ರಾಷ್ಟ್ರಕಟ್ಟಬೇಕು, ಬಡವರ ಉದ್ಧಾರವಾಗಬೇಕು, ಅರ್ಧಕ್ಕೆ ನಿಂತ ಕಾರ್ಯಗಳು ಮುಂದುವರಿಯಬೇಕು.... ವಿರೋಧಿಗಳು ಸಂಪೂರ್ಣ ನೆಲಕಚ್ಚಬೇಕು.... ಒಂದೇ ಎರಡೇ.... ಅನೇಕವಿದೆ.... ಅನೇಕವಿದೆ.... ಅನೇಕವಿದೆ....

ಆಹಾ.... ಪ್ರಪಂಚ ಅದೆಷ್ಟು ಸುಂದರವಾಗಿದೆ. ಭಾರತಾಂಬೆ ಎಷ್ಟೊಂದು ಹರ್ಷಚಿತ್ತದಿಂದಿದ್ದಾಳೆ...ನಮ್ಮೀ ಹವಾನಿಯಂತ್ರಿತ ಕೊಠಡಿಯ ಚುಮುಚುಮು ಚಳಿ, ಸುಂದರ ಕಾವ್ಯದಂತಹ ದೆಹಲಿ ನಗರದ ಅದ್ಭುತ ದೃಶ್ಯ, ಇವೆಲ್ಲಕ್ಕಿಂತಲೂ ಉಲ್ಲಾಸ, ಸಂತೋಷ ಪುಟಿಯುತ್ತಿರುವ ಮನಸ್ಸು.... ಮೈಯನ್ನು ಹಿತವಾಗಿ ಮೀಟುತ್ತಿರುವ ತಂಗಾಳಿ... ರವಿರಾಜನ ಬಂಗಾರ ಬಣ್ಣದ ಕಿರಣಗಳು ಇಳೆಯನ್ನು ಮುತ್ತಿಕ್ಕಲು ನಾಮುಂದು ತಾ ಮುಂದು ಎಂದು ಧಾವಿಸುತ್ತಿವೆ. ನಿದಿರಾ ದೇವಿಯ ಮಡಿಲಲ್ಲಿ ರಾಷ್ಟ್ರಕಟ್ಟುವ ಬೆಚ್ಚನೆಯ ಕನಸಿನಲ್ಲಿದ್ದ ನಾವು ಅತ್ಯಾಧುನಿಕ ತಲ್ಪದಿಂದ ಎದ್ದು ಪ್ರಾಥವಿಧಿಗಳನ್ನು ಪೂರೈಸಿದೆವು.

ಇಷ್ಟದೈವಗಳನ್ನು ಮನದಲ್ಲಿ ಪ್ರಾರ್ಥಿಸಿ, ನೋಸಿಯಾ ದೇವಿಯ ಚಿತ್ರಕ್ಕೆ ನಮಿಸಿದ್ದಾಯ್ತು. ಎಂದಿನಂತೆ ನಮ್ಮ ಸರಳ ಉಡುಗೆಯನ್ನು ತೊಟ್ಟು ಅದಕ್ಕೊಂದು ಮೇಲಂಗಿಯನ್ನೂ ಹಾಕಿಕೊಂಡೆವು. ಗಡ್ಡ ನೀವಿಕೊಂಡು ಆಕಾಶನೀಲಿ ಬಣ್ಣದ ಪೇಟವನ್ನು ಎಳೆದು ಕಟ್ಟುತ್ತಲೆ, ಅರ್ಧಾಂಗಿ ಶರಗುರುಣ ಕೌರ್ ತಂದಿಟ್ಟ ನಮ್ಮ ಆರೋಗ್ಯಕ್ಕೆ ಹೊಂದುವ ಸರಳ ಉಪಹಾರವನ್ನು ಸೇವಿಸಿಕೊಂಡೆವು. ರಥಿಕ ರಥವನ್ನುಮನೆಯ ಬಾಗಿಲಲ್ಲಿ ತಂದು ನಿಲ್ಲಿಸಿದ್ದಾನೆ. ಅಂಗರಕ್ಷಕರೊಡನೆ ಹೆಜ್ಜೆ ಹಾಕಿ ರಥವನ್ನೇರಿ ಒಡ್ಡೋಲಗಕ್ಕಾಗಿ ಸಭಾಂಗಣಕ್ಕೆ ಬಂದು ಸಿಂಹಾಸನಕ್ಕೆ ನಮಸ್ಕರಿಸಿ, ಹಾರಿ, ಏರಿ ಕುಳಿತು ಸಭೆಯತ್ತ ನೋಟ ಹರಿಸುತ್ತೇವೇ..... ಏನಾಶ್ಚರ್ಯ....? ಇದೇನಾಶ್ಚರ್ಯ....! ಪರಮಾಶ್ಚರ್ಯ......! ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಸಂದುಗೊಂದುಗಳಲ್ಲಿ ತಲೆತೂರುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ನಮ್ಮ ಭದ್ರತಾ ಸಿಬ್ಬಂದಿಗಳು ಹೆಣಗಾಡುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದಾರೆ. ವಂದಿ ಮಾಗಧರಿದ್ದಾರೆ. ಮಂದಿ ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ಆಸೀನರಾಗಿದ್ದಾರೆ, ಹಿರಿಯರು, ಕಿರಿಯರು, ಮಾಗಿದವರು, ಮಾಗಬೇಕಿರುವವರು, ಅನುಭವಿಗಳು, ಅರೆ ಅನುಭವಿಗಳು, ಅನನುಭವಿಗಳು.... ಆಹಾ... ಸಭೆಗೆ ಕಳೆಯೋ ಕಳೆ. ಇಂದು ನಮ್ಮ ಕನಸು ಸಂಪೂರ್ಣವಾಗಿ ನನಸಾಯಿತು. ಸ್ವಭಾವತಃ ಕಡಿಮೆ ಮಾತುಗಳನ್ನಾಡುವ ನಮಗೆ ಸಂತೋಷದಿಂದ ಇಂದು ಬಾಯಿಕಟ್ಟಿಯೇ ಹೋಗಿದೆ. ಮಾತೇ ಹೊರಡುತ್ತಿಲ್ಲ. ಆದರೆ, ನಾವಿಂದು ಮಾತಾಡಲೇ ಬೇಕಿದೆ. ಯಾರಲ್ಲೀ.......?

ಸ್ವಾಮಿ ಮಣಮಣ ಸಿಂಗರೇ...... ನಿಮ್ಮೀ ಪ್ರಚಂಡ ವಿಜಯಕ್ಕೆ ಮೊದಲಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಿವೇ ನಿಮ್ಮನ್ನು ಚಿವುಟಿಚಿವುಟಿ ನೋಡಿಕೊಳ್ಳುವಂತೆ ಅದು ಹೇಗೆ ಈಪರಿಯ ವಿಜಯ ಪ್ರಾಪ್ತಿಯಾಯ್ತು....?

ಭಾಗವತರೇ... ನಿಮ್ಮೀ ಅಭಿನಂದನೆ ಸಲ್ಲಬೇಕಿರುವುದು ನಮ್ಮ ಕಾಂಗ್ರೆಸ್‌ನ ಮಹಾರಾಣಿ ನೋಸಿಯಾ ದೇವಿಯವರಿಗೆ, ಅವರ ಪುತ್ರ ಬಿಸಿರಕ್ತದ ತರುಣ ರಾಜಕುಮಾರ ಹಾರುಲ್ ಹಾಗೂ ರಾಜಕುಮಾರಿ ಪಿಂಕಿದೇವಿಯವರಿಗೆ ಸಲ್ಲಬೇಕು..... ನಮ್ಮದೇನಿದೆ.... ನಾವು ನಿಮಿತ್ತ ಮಾತ್ರ ಎಲ್ಲವೂ ಆ ತಾಯಿಯ ದಯೆ... ಸ್ವಾಮೀ ಭಾಗವತರೆ ನಿಮ್ಮ ಕೊಂಕು ಬೇಡ ನಾವು ಗೆಲ್ಲುವ ನಂಬುಗೆ ನಮಗಿತ್ತು. ನಮ್ಮ ವಿರೋಧಿಗಳ ರಣತಂತ್ರವೇ ನಮ್ಮನ್ನು ಗೆಲ್ಲಿಸಿತು. ಅವರ ಮಾತು, ನಡೆಗಳೇ ನಮ್ಮ ಗೆಲುವನ್ನು ಸುಲಭವಾಗಿಸಿತು.

ಸಾಮ್ರಾಟ ಸಿಂಗರೇ...... ಅತ್ಯಂತ ಸಭ್ಯ, ಸುಸಂಸ್ಕೃತ, ಸ್ವಚ್ಚ ನಡೆನುಡಿಯ, ಮೆದು ಮಾತಿನ ರಾಜಕಾರಣಿ ಎಂಬುದಾಗಿ ವಿರೋಧಿಗಳಿಂದಲೂ ವ್ಯಕ್ತವಾಗುವ ಮೆಚ್ಚುಗೆ. ಆದರೆ ಮಹಾ ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಎದುರಾಳಿ ನಿಮ್ಮನ್ನು ದುರ್ಬಲ, ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬರದವರು, ಎಲ್ಲಕ್ಕೂ ನಂ. 10, ಜನಪಥ ರಸ್ತೆಯತ್ತ ಮುಖಮಾಡುವವರು ಎಂದೆಲ್ಲಾ ಜರೆದರು. ಒಂದು ಹಂತದ ತನಕ ಇವೆಲ್ಲವನ್ನೂ ಸಹಿಸಿಕೊಂಡ ತಾವುಗಳು ಕೊನೆಗೆ ಅಷ್ಟೇ ಖಾರದ ತಿರುಗೇಟು ನೀಡಿದ್ದೀರಿ. ದುರ್ಬಲರೆಂದು ಹೇಳಿದವರು, ತಾವ್ಯಾಕೆ ದುರ್ಬಲವಾಗಿ ಹೋದೆವೆಂಬ ಕಾರಣ ಸಿಗದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಇದಕ್ಕೇನನ್ನುತ್ತೀರಿ ಸ್ವಾಮೀ....?

ಭಾಗವತರೇ.... ಇದಕ್ಕೆ ನಾವು ಅನ್ನಬೇಕಾದ್ದು ಏನೂ ಇಲ್ಲ. ನಮ್ಮ ಪ್ರಜೆಗಳೇ ಸೂಕ್ತವಾದ ಉತ್ತರ ನೀಡಿದ್ದಾರೆ. ಇದಕ್ಕಿಂತ ಸಮರ್ಥ ಉತ್ತರ ಬೇರೆ ಬೇಕಿಲ್ಲ. ಗದ್ದರಿಸಿ ಮಾತನಾಡುವುದೇ ಸಬಲತೆಯೋ? ನೀವೇ ನೋಡಿದ್ದೀರಿ..... ಖಾತೆ ಹಂಚಿಕೆಯ ವೇಳೆ ಆ ದ್ರಾವಿಡ ಪಕ್ಷದವರ ಎಲ್ಲಾ ಕ್ಯಾತೆಗಳಿಗೆ ನಾವು ಬಗ್ಗಿದ್ದೇವೆಯೇ? ಚುನಾವಣೆಗೆ ಮುನ್ನ ಆರು ಸ್ಥಾನ ಕೊಡುತ್ತೇವೆ ಅಂದೆವು. ಜೆಡಿಎಸ್ ಆಗ ಮುಖ ತಿರುವಿತು. ಈಗ ಬೇಷರತ್ ಬೆಂಬಲ ಘೋಷಿಸಿ ಸಚಿವಗಿರಿ ನೀಡಿರೆಂದು ಗಿಂಜಿದರು. ನಾವು ಬಗ್ಗಿದೆವಾ? ಹೇಳಿ ಇದು ದೌರ್ಬಲ್ಯವೇ....? 10, ಜನಪಥದತ್ತ ನೋಡಿದರೆ ಏನಾಯ್ತೀಗ, ಅಲ್ಲಿ ನಮ್ಮ ಶಕ್ತಿದೇವತೆ ಇದ್ದಾರೆ....

ಆದರೂ.... ಸಿಂಗರೇ ವಿರೋಧಿ ಪಕ್ಷಗಳು ಪ್ರಚಾರದ ವೇಳೆ ಚುನಾವಣಾ ವಿಚಾರಗಳನ್ನೇ ಎತ್ತಲಿಲ್ಲ.... ಅಗತ್ಯವಸ್ತುಗಳ ಬೆಲೆಗಳಂತೂ ರಾಕೆಟ್‌ಗಳಂತೆ ಮೇಲೆಮೇಲೆ ಹೋಗಿ ಆಕಾಶದಲ್ಲೇ ತೇಲುತ್ತಿವೆ. ವಾರವಾರ ಪ್ರಕಟವಾಗುವ ಹಣದುಬ್ಬರದ ದರ ಪಾತಾಳ ಕಂಡರೂ ಆಕಾಶದಲ್ಲಿರುವ ಬೆಲೆಗಳ್ಯಾಕೆ ಕೆಳಮುಖ ಮಾಡುತ್ತಿಲ್ಲ...? (ಕಳೆದ ಚುನಾವಣೆಯಲ್ಲೊಮ್ಮೆ ಈರುಳ್ಳಿ ಬೆಲೆ ದೆಹಲಿಯ ಬಿಜೆಪಿ ಸರ್ಕಾರವನ್ನು ಉರುಳಿಸಿತ್ತು) ಭಯೋತ್ಪಾದಕರನ್ನು ಸೂಕ್ತವಾಗಿ ಮಟ್ಟಹಾಕಲು ಆಗುತ್ತಿಲ್ಲ.... ಇದರಂತೆ ಅನೇಕ ವಿಚಾರಗಳಿವೆ. ಇವುಗಳನ್ನು ನಿಮ್ಮ ವಿರೋಧಿಗಳು ಮತದಾರರ ಮುಂದೆ ಎತ್ತದೇ ಇದ್ದುದೇ ನಿಮಗೆ ಅನುಕೂಲವಾಯಿತೇ.....?

ಸ್ವಾಮಿ ಭಾಗವತರೇ..... ಈ ಕುರಿತು ನಮಗೂ ಆಂತರ್ಯದಲ್ಲಿ ತಿಪುತಿಪು ಅನ್ನುತ್ತಲೇ ಇತ್ತು. ಅದೃಷ್ಟವಶಾತ್ ನಮ್ಮ ವಿರೋಧಿಗಳು ಈ ವಿಚಾರಗಳನ್ನು ಎತ್ತಲೇ ಇಲ್ಲ. ಕಡಿ, ಕೊಚ್ಚು, ದುರ್ಬಲ ಅನ್ನುತ್ತಲೇ ಪ್ರಚಾರ ಮಾಡಿದರು. ನಮ್ಮನ್ನು ಅಂದೊಮ್ಮೆ ಬೀಳಿಸಲು ಹೊರಟ ರಕಾಸ್ ಪಾರಟ್ ಎಂಬವರು ಮೂರನೇ ಲಂಗವೊಂದನ್ನು ಹುಟ್ಟು ಹಾಕಿದರು ನೋಡಿ. ಅದನ್ನು ಕಂಡು ನಮಗೂ ಜುಂಜುಂ ಅಂದಿದ್ದೂ ಸುಳ್ಳಲ್ಲ. ನಮ್ಮಯುವರಾಜರ ಕೈಲಿ ಹೇಳಿಕೆ ನೀಡಿಸಿ ಚುನಾವಣೆ ನಡೆಯುತ್ತಿರುವಾಗಲೇ ಇವರಿಗೆಲ್ಲ ಮತ್ತೆ ಆಹ್ವಾನ ನೀಡಿದ್ದೆವು. ದಕ್ಷಿಣದ ಅಮ್ಮನನ್ನೂ, ಬಿಹಾರದ ಕುಮಾರರನ್ನೂ ಹೊಗಳಿಸಿದ್ದೆವು. ಪರಿಸ್ಥಿತಿ ಹೇಗೆ ತಿರುಗುತ್ತದೆ ನೋಡಿ.... ಕಾಂಗ್ರೆಸ್ ಎಲ್ಲಿ ಕುಸಿಯುತ್ತದೋ ಎಂದು ಬೆದರಿದ ಕೆಲವು ಮಿತ್ರ(ದ್ರೋಹಿಗಳು)ರು ಅತ್ತ ತೃತೀಯ ಲಂಗದತ್ತಲೂ ಒಂದು ಕಣ್ಣಟ್ಟು ನಾಲ್ಕನೆ ಲಂಗ ಹುಟ್ಟುಹಾಕಿದರು. ಮತದಾರ ಸರಿಯಾಗಿ ಚಳ್ಳೆಹಣ್ಣು ತಿನ್ನಿಸಿದ. ಹೊಸಹೊಸ ಲಂಗದತ್ತ ಮನಸ್ಸು ಹರಿಬಿಟ್ಟವರೆಲ್ಲ, ಇದ್ದ ಲಂಗವನ್ನೂ ಕಳೆದುಕೊಂಡು ಬೆತ್ತಲಾದರು...ಚಾತುರ್ಯ ಮೆರೆದವರು ರಾಜರಾದರು!

ಪ್ರಧಾನಿಗಳೇ.... ಕಳೆದ ಬಾರಿಗಿಂತಲೂ ಈ ಸರ್ತಿ ತಾವು ಹೆಚ್ಚು ಗಟ್ಟಿಯಾಗಿದ್ದೀರಿ. ಆದರೂ ನಿಮ್ಮ ಸೆರಗಿನಲ್ಲಿ ಕೆಂಡವಿದ್ದೇ ಇರುತ್ತದೆ. ತಮಮಾ ಬಾನರ್ಜಿ ಎಂಬ ಗಟ್ಟಿಗಿತ್ತಿ ನಾರಿ ತಮ್ಮ ಹಠಿಸಾಧಿಸುವಲ್ಲಿ ಪ್ರಸಿದ್ಧರು. ದ್ರಾವಿಡ ಪಕ್ಷದವರು ತಮ್ಮ ನೆಲ, 'ಜಲ' ಭಾಷೆ ಅಂದಾಗ ಪಕ್ಷಬೇಧ ಮರೆತು ಕ್ರಾವ್... ಕ್ರಾವ್... ಕ್ರಾವ್... ಅನ್ನುವವರು. ಇವರನ್ನೆಲ್ಲ ಸಂಭಾಳಿಸಿಕೊಂಡು... ವೈವಿಧ್ಯಮಯ ಸಂಸ್ಕೃತಿಯ ಈ ವಿಶಾಲ ಭರತಖಂಡವನ್ನು ಆಳಬೇ.....

ಹೋಯ್ ಭಾಗವತರೇ... ಅಧಿಕಪ್ರಸಂಗ ಸಾಕು... ಚುನಾವಣೆಯಲ್ಲಿ ಗೆದ್ದವರಿಗೆ ಮುಂದೆ ದೇಶವನ್ನು ಹೇಗೆ ಮುನ್ನಡೆಸಬೇಕೆಂಬುದು ತಿಳಿದಿರುತ್ತದೆ.... ಕಳೆದ ಬಾರಿಯ ಅಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಮಾತನಾಡದೆಯೇ ಎಲ್ಲವನ್ನೂ ಸಂಭಾಳಿಸಲಿಲ್ಲವೇ.....? ಸಂಪುಟದಲ್ಲಿ ಅತಿರಥಮಹಾರಥ ಮಂತ್ರಿಗಳಿದ್ದಾರೆ. ನಮ್ಮ ಅಧಿನಾಯಕಿ ಇದ್ದಾರೆ.... ನಾವು ಹೆಚ್ಚೇನು ಮಾಡಬೇಕಾಗಿರುವುದಿಲ್ಲ. ವಿಶ್ವಾಸ ಮತ ಎದುರಿಸಬೇಕಿದ್ದರೆ ಸೂಟ್ಕೇಸ್‌ಗಳಿವೆ. ಆಧುನಿಕ ಚಿಂತನೆಗೆ ಯುವರಾಜ ಹಾರುಲರು ಜತೆಯಲ್ಲೇ ಇರುತ್ತಾರೆ.... ಇದೆಲ್ಲಕ್ಕೂ ಮಿಕ್ಕು ನಮ್ಮಬಳಿ ಅಗಾಧವಾದ ಅನುವಭವಿದೆ.... ಆತ್ಮವಿಶ್ವಾಸವಿದೆ.... ಎಲ್ಲವೂ ಸುಲಲಿತವಾಗಿ ನಡೆಯುತ್ತದೆ.

ನಿಮ್ಮ ದೃಢವಿಶ್ವಾಸಕ್ಕೆ ಅಭಿನಂದನೆಗಳು ಸಾಮ್ರಾಟರೇ.... ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣಿರಿ.... ಮತಬ್ಯಾಂಕಿನ ಮೇಲೆಯೇ ನಿಮ್ಮ ಕಣ್ಣುಹೆಚ್ಚು ಹೋಗದಿರಲಿ. ಯಾವಧರ್ಮ, ಜಾತಿ, ಪಂಗಡವಿರಲೀ.... ಬಡವರೆಲ್ಲ ಬಡವರೇ... ಹಸಿವು ಕಷ್ಟಗಳೂ ಎಲ್ಲರಿಗೂ ಒಂದೇ.... ಅದರಲ್ಲಿ ಮೇಲ್ಜಾತಿ, ಕೀಳ್ಜಾತಿ, ಆ ಧರ್ಮ, ಈ ಧರ್ಮ ಎಂಬ ಭೇದಭಾವವಿಲ್ಲ... ಜಾತ್ಯತೀತರೆಂದು ತೋರಿಸಿಕೊಳ್ಳುವ ರಭಸದಲ್ಲಿ ಯಾವುದಾದರೂ ನಿರ್ದಿಷ್ಟ ಜಾತಿ-ಧರ್ಮವನ್ನು ಓಲೈಸಿದಿರೋ..., ತಾವು ಜಾತ್ಯತೀತ ಕೋಮುವಾದಿಗಳಾಗುತ್ತೀರಿ. ಪಕ್ಷಪಾತವಿಲ್ಲದ ಆಡಳಿತನೀಡಿ, ಮತಗಳು ನಿಮ್ಮತ್ತ ಹರಿದುಬರುತ್ತವೆ.

ಆ ಭಾರತಾಂಬೆ ಸರ್ವರಿಗೂ ಒಳಿತಾಗುವಂತ ಆಡಳಿತವನ್ನು ನಿಮ್ಮಿಂದ ನೀಡಿಸಲೀ... ಸರ್ವೇಜನ ಸುಖಿನೋಭವಂತು...

ಮಂಗಳಂ......!

ಗುರುವಾರ, ಏಪ್ರಿಲ್ 9

ದಯವಿಟ್ಟು ನಮ್ಗೊಂದು ಚೆಂದದ ಹೆಸರು ಸೂಚಿಸಿ

ಯಾಕೋ ಕೆಲ್ಸ ಬೋರ್ ಹೊಡಿತಾ ಇದೆ. ಹೋಂ ಸಿಕ್ ಜೋರಾಗಿದೆ. ಏನ್ ಮಾಡೋಕು ತೋಚುತ್ತಿರಲಿಲ್ಲ. ಆರ್ಥಿಕ ಹಿಂಸರಿತದ ಈ ಸಂದರ್ಭದಲ್ಲಿ ಕೆಲ್ಸ ಬಿಡ್ಬೇಡ ಎಂಬುದೇ ಎಲ್ಲರ ಸಲಹೆ. ಹಾಗಾಗಿ, ನುಂಗಲು ಆಗದೆ ಉಗಿಯಲು ಆಗದೆ ಒದ್ದಾಡುತ್ತಲೇ ಇರುವ ಈ ಸಂದರ್ಭದಲ್ಲೀ......

ಒಮ್ಮೊಮ್ಮೆ ಅನ್ನಿಸುತ್ತಿತ್ತು. ಚುನಾವಣಾ ಕೆಲ್ಸ ಮಾಡೋಣವೇ ಅಂತ. ಸಹೋದ್ಯೋಗಿ ಭುವನ್ ಬೇರೆ 'ಈರ್ ಓಟುಗುಂತ್ಲೆಯೇ' (ಓಟಿಗೆ ನಿಲ್ಲಿ) ಅಂತ ನನ್ನನ್ನು ಕೆಣುಕುತ್ತಿದ್ದ. ಓಟಿಗೆ ನಿಲ್ಲಲು ಆಗದಿದ್ದರೂ, ವಿವಿಧ ಪಕ್ಷಗಳು ನಡೆಸುವ ಸಮಾವೇಶಗಳಲ್ಲಿ ಭಾಗವಹಿಸುವ ಕಾಯಕ ಮಾಡೋಣವೇ ಅಂತನ್ನಿಸಿದೆ. ಇಲ್ಲವಾದರೆ, ಇಂತಹ ಸಭೆ ಸಮಾರಂಭಗಳಿಗೆ ಜನಪೂರೈಸುವ 'ಸೇವೆ' ಮಾಡಿ ಒಂದು ತಲೆಗೆ ಇಷ್ಟು ಅಂತ ಫಿಕ್ಸ್ ಮಾಡಿದರೂ ಆಗಬಹುದಲ್ಲವೇ? ಅವಕಾಶ ಸಿಕ್ಕಾಗ ಧಕ್ಕಿಸಿಕೊಳ್ಳಬೇಕೆಂದು ದೊಡ್ಡವರು ಹೇಳಿದ್ದಾರೆ. ಹೇಗಿದ್ದರೂ ಇದು ಲಾಭದಾಯಕವೇ. ಅದಲ್ಲದೆ, ಎಲ್ಲಾ ಪಕ್ಷದವರೂ ಒಂದೊಂದು ಓಟಿಗೆ ಒಂದೊಂದು ಕೆಂಪು ನೋಟು, ಮೂಗುತ್ತಿ, ಸೀರೆ, ಕಿವಿಯೋಲೆ(ಒಂದು ಕಿವಿಗೆ) ಎಲ್ಲಾ ಕೊಡುತ್ತಾರೆ ಎಂಬ ರಂಗುರಂಗಿನ ಸುದ್ದಿ ಕೇಳುವಾಗಲಂತೂ 'ಹೋಗೇ ಬಿಡ್ಬೇಕತ್ತ' ಎಂಬ ತುಡಿತ ಜೋರಾಗಿತ್ತು.

ಆದರೆ, ಈಗ ಇದನ್ನೆಲ್ಲ ಬಿಟ್ಟು, ನಾವೆಲ್ಲ ಸಹೋದ್ಯೋಗಿಗಳು ಸೇರಿ ಹೊಸ ಬಿಸ್ನೆಸ್ ಶುರು ಮಾಡೋ ಐಡಿಯಾ ಹಾಕ್ಕೊಂಡಿದ್ದೇವೆ. ವರುಣ್ ಗಾಂಧಿ ಎಲ್ಲಿದ್ದರೋ? ದೇವರಂತೆ ಉದ್ಭವವಾಗಿ ಎಂತಾ ಹೇಳಿಕೆ ನೀಡಿಬಿಟ್ಟಿದ್ದಾರೆ.(ಅವರು ಇದನ್ನು ಇಲ್ಲವೇ ಇಲ್ಲ ಅನ್ನುತ್ತಿದ್ದಾರೆ. ಅವರು ಇಲ್ಲ ಅಂದರೂ ಪರ್ವಾಗಿಲ್ಲ) ನಮಗೊಂದು ಐನಾತಿ ಐಡಿಯಾಕ್ಕೆ ತಳಪಾಯ ಹಾಕಿದ್ದಾರೆ. ಅವರೀಗ ನಮ್ಮ ಪಾಲಿಗೆ ಪ್ರಾತ:ಕಾಲ ಸ್ಮರಣೀಯರು. ಯಾಕಂತೀರಾ? ಕೇಳುವಂತವರಾಗಿ.....

ವರುಣ್ ಗಾಂಧಿ ಹಿಂದೂಗಳ ವಿರುದ್ಧ ಮಾತನಾಡುವವರ ಕೈ ಕತ್ತರಿಸುತ್ತೇನೆ ಅಂದರಂತೆ. ಶುರವಿಗೆ ನಂಗೂ ಇದೆಂತಾ ಹೇಳಿಕೆ ಅಂತ ಕಿರಿಕಿರಿಯಾಗಿತ್ತು. ಆದರೆ, ಅವರು ಪಿಲಿಭಿತ್‌ನಲ್ಲಿ ಭಾಷಣ ಮಾಡಿ ಒಂದು ವಾರದ ಬಳಿಕ ಪ್ರಚಾರಕ್ಕೆ ಬಂದು, ಪ್ರಕರ ಹೊಳಪು ಕಂಡ ಈ ಹೇಳಿಕೆ, ಫಳಫಳನೆ ಹೊಳೆಯುತ್ತಾ ಎಲ್ಲೆಲ್ಲೋ ಹೋಗಿ, ಚುನಾವಣೆಗೆ ನಿಂತಿರುವ ಅವರೀಗ ಜೈಲಿನಲ್ಲಿ ಕುಳಿತುಕೊಳ್ಳುವಂತಾಗಿದೆ.

ಈ ಹುಡುಗು ಮುಂಡೇದು, ಏನೋ ಮಾತಾಡಿದೆ ಅಂತ ಸುಮ್ಮನಾಗುತ್ತಿರುವಂತೆ, ಇಲ್ಲೇ ನಮ್ಮ ಕಾಲ್ಬುಡದಲ್ಲೇ ಇನ್ನೊಬ್ಬರೂ ಕತ್ತರಿಸಲು ಮುಂದಾದಾಗ ಮಾತ್ರ ಇದೇಕೆ ಹೀಗೆ ಅನ್ನಿಸಿತ್ತು. ಅದೂ ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹಿಂದುತ್ವ ಪ್ರತಿಪಾದಿಗಳ ಕೈ ಕತ್ತರಿಸುವ ಮಾತನ್ನಾಡಿದರು. ತಗೊಳ್ಳೀ.. ಮಾರನೆ ದಿನವೇ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಿಂದೂ ವಿರೋಧಿಗಳ ತಲೆಯನ್ನೇ ಕತ್ತರಿಸುವುದಾಗಿ ಹೇಳಿದರು. ಅವರ ಕಾಲು ಕತ್ತರಿಸವುದಾಗಿ ಇನ್ಯಾರೋ ಹೇಳಿದ್ದಾರಂತೆ, ಮಿತ್ರ ತ್ರಾಸಿ ಹೇಳ್ತಿದ್ದರು. ಇನ್ನೊಬ್ಬ ಶಾಸಕ ಸಿ.ಟಿ. ರವಿ ಅವರಂತೂ, ಹಿಂದುತ್ವದ ಪ್ರತಿಪಾದಕರ ಕೈಕತ್ತರಿಸಲು ಅವರು ಮುಂದಾಗುವ ಮುನ್ನವೇ ಅವರ ತಿಥಿ ಮಾಡಿಬಿಡ್ತೇವೆ ಎಂದು ಸಾರಿದರು.

ಈ ಕತ್ತರಿಸುವ ಸೋಂಕು ಆಂಧ್ರಕ್ಕೂ ವ್ಯಾಪಿಸಿ ಅಲ್ಲಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಅಲ್ಪಸಂಖ್ಯಾತರ ವಿರುದ್ಧ ಬೆರಳೆತ್ತಿದವರ ಕೈ ಕತ್ತರಿಸುವುದಾಗಿ ಧಿಗಿಣ ಹೊಡೆದಿದ್ದಾರೆ. ಬಿಹಾರದಲ್ಲಿ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ವರುಣ್ ಮೇಲೆ ರೋಲರ್ ಹರಿಸಿ ಪುಡಿಗಟ್ಟವುದಾಗಿ ತೊಡೆ ತಟ್ಟಿದರು. ಇಷ್ಟೆಲ್ಲ ಕತ್ತರಿಸುವ, ಕೊಚ್ಚುವ, ಈ ಮೂಲಕ ಚುಚ್ಚುವ ಸುದ್ದಿಗಳಲ್ಲಿ ನಾಡಿಗೆ ನಾಡೇ ಮುಳುಗಿ ಹೋಗಿದ್ದಾಗ ನಮ್ಮ ಮಾಜಿ ಡಿಸಿಎಮ್ಮು, ಸಿದ್ರಾಮಣ್ಣ ನಾನು ಹಿಂದುತ್ವ ವಿರೋಧಿಸುತ್ತೇನೆ, ಬನ್ನಿ ನನ್ನ ತಲೆ ಕತ್ತರಿಸಿ ಎಂಬುದಾಗಿ (ತಲೆ 'ದಂಡ'ದ)ಆಹ್ವಾನ ನೀಡಿದ್ದಾರೆ...ಇವಿಷ್ಟು ಸ್ಥೂಲವಾಗಿ ಕತ್ತರಿಸು, ಪ್ರತಿಯಾಗಿ ಕತ್ತರಿಸು, ಕತ್ತರಿಸಿಕೊಳ್ಳಲು ಮುಂದಾಗು- ಮುಂತಾದ ಸುದ್ದಿಗಳಾದರೆ, 'ಬ್ರೇಕಿಂಗ್ ನ್ಯೂಸ್' ಕಣ್ಣಿಗೆ-ಕಿವಿಗೆ ಬೀಳದಿರುವ ಇನ್ನೆಷ್ಟು 'ಕತ್ತರಿಸು' ಭರವಸೆಗಳು ಈ ಅಖಂಡ ಭರತ ಖಂಡದಲ್ಲಿ ಹೊರಬಿದ್ದಿರಲಿಕ್ಕಿಲ್ಲ, ನೀವೇ ಹೇಳಿ?
ಹಾಗಾಗಿ ನಮ್ಮನ್ನು ಪ್ರತಿನಿಧಿಸಲು, ಆಳಲು ಹೊರಟಿರುವ ಜನನಾಯಕರು ಪಕ್ಷಬೇಧ ಮರೆತು ಕತ್ತರಿಸಲು ಹೊರಟಿರುವಾಗ; ಈ 'ಕತ್ತರಿಸುವುದರಲ್ಲೂ' ಏನೋ ಇದೆ ಎಂದು ನಮಗನಿಸದೆ ಇರಲಿಲ್ಲ. (ಆಗೋದೆಲ್ಲ ಒಳ್ಳೇದಕ್ಕಂತೆ, ಬಲ್ಲವರು ಹೇಳಿದ್ದಾರೆ) ಹಾಗಾಗಿ ನಮ್ಮ ಎಂದಿನ 'ಟೀ ಅಧಿವೇಶನ'ದಲ್ಲಿ ನಾವೆಲ್ಲ ಸಹೋದ್ಯೋಗಿಗಳು ಈ ವಿಷಯವನ್ನು ಚರ್ಚಿಸಿಯೇ ಚರ್ಚಿಸಿದೆವು. ಛಕ್ಕನೆ ಹೊಳೆದಿದೆ ನೋಡಿ ಐಡಿಯಾ!

ಹೇಗಿದ್ದರೂ ಒಂದಲ್ಲ ಒಂದು ಪಕ್ಷ; ಆಯ್ತು ದೊರೆಯೇ... ನೀವು ಹೇಳಿದಂಗೆ ಇರಲಿ, ಚೌಚೌ ಪಕ್ಷ ಅಧಿಕಾರಕ್ಕೆ ಬರುವುದು ಗ್ಯಾರಂಟಿ ತಾನೆ? ಹೀಗಿರುವಾಗ,ಚುನಾವಣೆಗೆ ಮುನ್ನ ನೀಡಿದ ಭರವಸೆಯನ್ನು ಈಡೇರಿಸಲೇ ಬೇಕು. ಅದವರ ಕರ್ತವ್ಯ. ಹಾಗಾಗಿ ಅವರೆಲ್ಲ ಕತ್ತರಿಸುವುದು ಖಂಡಿತ. ಇದು ಲಾಜಿಕ್ಕು. ಆಗ ಒಮ್ಮೆಗೆ ಕತ್ತಿ, ಮಚ್ಚುಗಳಿಗೆ ಬೇಡಿಕೆ ಬರಬಹುದು. ಈ ಹಿನ್ನೆಲೆಯಲ್ಲಿ ನಾವು 'ಕತ್ತಿ/ಮಚ್ಚು ಅಥವಾ ದೊಡ್ಡ ಕತ್ತರಿ' ಉತ್ಪಾದನೆಯ ಹೊಸ ಉದ್ಯಮ ಆರಂಭಿಸುವ ಕುರಿತು ಗಂಭೀರ ಆಲೋಚನೆ ಮಾಡಿ ಇದೀಗಾಗಲೇ ಆರ್ ಆಂಡ್ ಡಿ ಕಾರ್ಯ ಆರಂಭಿಸಿದ್ದೇವೆ. ಕೈ, ಕಾಲು, ತಲೆ ಇಲ್ಲವೇ ಸೊಂಟ ಯಾವುದನ್ನೂ ಬೇಕಿದ್ದರೂ ಕತ್ತರಿಸಲು ಅನುಕೂಲವಾದ ಹತ್ಯಾರುಗಳ ಪ್ರೊಡಕ್ಷನ್‌ಗೆ ನಾವು ಇಳಿಯಲಿದ್ದೇವೆ. ಯಾವ ಪಕ್ಷದವರು ಯಾವುದರಲ್ಲಿ, (ಅಂದರೆ ಕತ್ತಿಯಲ್ಲೋ, ಇಲ್ಲ ಮಚ್ಚಿನಲ್ಲೋ) ಹೆಚ್ಚು ಕತ್ತರಿಸಲು ಇಷ್ಟಪಡುತ್ತಾರೆ ಎಂಬ ರಹಸ್ಯ ಸರ್ವೇಕ್ಷಣೆಯೂ ನಡೆಯುತ್ತಿದೆ.

ಥ್ಯಾಂಕ್ಸ್ ಟು ವರುಣ್, ಥ್ಯಾಂಕ್ಸ್ ಟು ಬ್ರೇಕಿಂಗ್ ನ್ಯೂಸ್(ಇಲ್ಲವಾದರೆ ಇಷ್ಟು ದೊಟ್ಟ ಮಟ್ಟದ ಆಲೋಚನೆಗೆ ಸ್ಫೂರ್ತಿ ಎಲ್ಲಿರುತ್ತಿತ್ತು), ಥ್ಯಾಂಕ್ಸ್ ಟು ಅಭಿವ್ಯಕ್ತಿ ಸ್ವಾಂತಂತ್ರ್ಯ(ಸಂವಿಧಾನದ ವಿಧಿ 19(1)(ಎ)). ನಾವು ರಾಷ್ಟ್ರವ್ಯಾಪಿ 'ಕತ್ತಿ/ಮಚ್ಚು ಅಥವಾ ದೊಡ್ಡ ಕತ್ತರಿ' ಪೂರೈಸುವಂತಹ ಬಿಸ್ನೆಸ್ಸನ್ನು ದೊಡ್ಡ ಮಟ್ಟದಲ್ಲಿ ನಮ್ಮ ಊರಿನಿಂದಲೇ ಆರಂಭಿಸುತ್ತಿದ್ದೇವೆ. ಇದೀಗಾಗಲೇ ಒಂದಷ್ಟು ಎಂಬಿಎ ಆಗಿರುವ ಅಭ್ಯರ್ಥಿಗಳನ್ನು ಮಾರ್ಕೆಟಿಂಗ್‌ಗೆ ಬಿಟ್ಟಿದ್ದೇವೆ. ಕತ್ತಿ ತಯಾರಿಕಾ ವಿಶೇಷ ಯಂತ್ರ ಜಪಾನಿಂದ ಬರಲಿದೆ. ವಿಶೇಷ ತಜ್ಞರೂ ಅಲ್ಲಿಂದಲೇ ಯಂತ್ರದೊಟ್ಟಿಗೆ ಆಗಮಿಸಲಿದ್ದಾರೆ. ಲೇಡಿ ಸಿಇಓ, ಎಚ್ಆರ್ ನೇಮಕವಾಗಿ ಸ್ಕ್ರೂಟಿನಿ ನಡೆಯುತ್ತಿದೆ. ಕೆಲವೇ ಹುದ್ದೆಗಳು ಬಾಕಿ ಇವೆ. ಸ್ಥಳೀಯರಿಗೆ ಆದ್ಯತೆ. ಆಸಕ್ತರು (ಕತ್ತರಿಸುವ ಅನುಭವ ಇದ್ದರೆ ಹೆಚ್ಚಿನ ಪ್ರಾಶಸ್ತ್ಯ) ಸಿ.ವಿ. ಫಾರ್ವರ್ಡ್ ಮಾಡಬಹುದು. ನಮಗೆ ನಿಧಾನಕ್ಕೆ ಎಕ್ಸ್‌ಪೋರ್ಟ್ ಆಲೋಚನೆಯೂ ಇದೆ. ದಯವಿಟ್ಟು ನಮ್ಮ ಸಂಸ್ಥೆಗೊಂದು ಚೆಂದದ ಹೆಸರು ಸೂಚಿಸಿ. ಹೆಸರಲ್ಲಿ ವರುಣ್, ಬ್ರೇಕಿಂಗ್ ಎಂಬೆಲ್ಲ ಶಬ್ದಗಳಿದ್ದರೆ ನಮ್ಮ ಋಣತೀರೀತು.

ಈ ನಮ್ಮ ವೆಂಚರ್‌ಗೆ ನಾವು ನಮ್ಮ ಸಂಬಳದಿಂದಲೇ ಬಂಡವಾಳ ತೊಡಗಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಸೋ, ಸ್ಯಾಲರಿ ಕ್ರೆಡಿಟ್ ಆಗಿದ್ಯೇ ಅಂತಾ ನೆಟ್ ಬ್ಯಾಂಕಿಂಗ್‌ನಲ್ಲಿ ಚೆಕ್ ಮಾಡ್ತಾ ಇದ್ದೆವು. ಕಾಕತಾಳಿಯವೋ ಗೊತ್ತಿಲ್ಲ. ಅಲ್ಲೂ ಕತ್ತರಿಸುವ ಸುದ್ದಿ. ಕತ್ತರಿಸುವ ಸುದ್ದಿಗಳನ್ನು ನೋಡುತ್ತಲೇ ವೇತನ ಜಮಾ ಮಾಡ್ತಿದ್ದರೋ? ವೃತ್ತಿ ತೆರಿಗೆ ಕಟ್!

ಸೋಮವಾರ, ಮಾರ್ಚ್ 9

ಅವ್ವಾ..... ಸ್ವರ್ಗಕ್ಕೇ ಹೋಗಿ

ನನಗೆ ಬುದ್ಧಿ ತಿಳಿದಂದಿನಿಂದ (ಅಥವಾ ಅವನಿಗೆ ಗಡ್ಡಮೀಸೆ ಮೂಡಿದಂದಿನಿಂದ) ಅವನ ಗಡ್ಡವಿಲ್ಲದ ಮುಖವನ್ನು ನೋಡಿರಲಿಲ್ಲ. ಆತನ ವಿವಾಹದ ದಿನ, ಹೇಮಣ್ಣ ಮದುವೆಗೆ ಗಡ್ಡ ತೆಗೆಯಲಿಲ್ಲ ಎಂಬುದು ಊರಿನಲ್ಲಿಡೀ ಬಿಸಿಬಿಸಿ ಚರ್ಚೆಯ ವಸ್ತುವಾಗಿತ್ತು. ಅಂಥ ಅಣ್ಣ ತಲೆ, ಗಡ್ಡ ಬೋಳಿಸಿಕೊಂಡು, ಒದ್ದೆ ಬಟ್ಟೆಯಲ್ಲಿ ಕಣ್ಣಲ್ಲಿ ನೀರಿಳಿಸಿಕೊಂಡು ನಿಂತಿದ್ದ. ಅವನನ್ನು ಈ ರೂಪದಲ್ಲಿ ಕಂಡ ಅವನ ಮೂರರ ಹರೆಯದ ಮಗ ಕಿಟಾರನೆ ಕಿರುಚಿಕಿರುಚಿ ಅತ್ತ. ನಾವೂ ಅಳುತ್ತಿದ್ದೆವು. ನಮಗಾರಿಗೂ ಪರಸ್ಪರರ ಮುಖ ನೋಡುವುದು ಬೇಡ ಎಂಬಂತಾಗುತ್ತಿತ್ತು. ಇಲ್ಲವೆಂದರೆ, ನಾವೆಲ್ಲ ಒಡಹುಟ್ಟಿದವರು ಒಟ್ಟು ಸೇರಿದೆವೆಂದಾದಾಗ, ಅಲ್ಲಿ ನಗು, ಹರ್ಷ ಆನಂದ ಸಂಭ್ರಮ, ಮಕ್ಕಳ ಆಟ....
****

ನಾವೆಲ್ಲ ಯಾವ ಅವ್ವನ ಸುತ್ತಮುತ್ತ ಕುಳಿತು ಈ ಸಂಭ್ರಮ ಪಡುತ್ತಿದ್ದೆವೋ ಆ ಅವ್ವನೇ ಇಲ್ಲ. ಅವ್ವನ ಕೋಣೆ ಖಾಲಿ. 19 ಗಂಟೆಗಳ ಪ್ರಯಾಣ ಮಾಡಿ ಫೆಬ್ರವರಿ ಒಂದರಂದು ಮನೆ ತಲುಪಿದಾಗ ನಂಗೆ ನೋಡಲು ಉಳಿದಿದ್ದದ್ದು ಅವರು ಮಲಗುತ್ತಿದ್ದ ಮಂಚದ ಮೇಲಿದ್ದ ಸುರಳಿ ಸುತ್ತಿದ್ದ ಹಾಸಿಗೆ ಮಾತ್ರ.

ದೂರದೂರದಿಂದ ನಾವೆಲ್ಲ ಮನೆಗೆ ಬಂದು ಮೆಟ್ಟಿಲೇರುತ್ತಲೇ ಅವ್ವಾ ಅಂದಾಗ, ಎಲ್ಲಿದ್ದರೂ ಓಡೋಡಿ ಬರುತ್ತಿದ್ದ ಅವ್ವ ಎಲ್ಲಿ...? ಇಲ್ಲ. ಅಂಗಳದಲ್ಲಿ ಜೀಪು ಸದ್ದು ಕೇಳುತ್ತಿರುವಂತೆ, 'ಬಂದ್ಲು, ಬಂದ್ಲು' ಅನ್ನುತ್ತಾ ಅಕ್ಕ, ಅತ್ತಿಗೆ, ಅಕ್ಕಂದಿರ ಮಕ್ಕಳು ಎಲ್ಲರೂ ಓಡಿಬಂದರು. ಯಾರು ಬಂದು ಎದುರುಗೊಂಡರೂ ಅವ್ವ ಬಂದಂತಾಗುತ್ತದಾ? ನಾಲ್ಕು ತಿಂಗಳ ಹಿಂದೆ ಮನೆಗೆ ಹೋದಾಗಲೂ ಅಮಾಯಕ ನಗು ಚೆಲ್ಲುತ್ತಾ ನೆಟ್ಟಗೆ ನಡೆಯಲಾಗದಿದ್ದರೂ ಓಡಿ ಬಂದು ನನ್ನ ಕೈಲಿದ್ದ ಬ್ಯಾಗು ಇಸಿದುಕೊಂಡಿದ್ದ ಅವ್ವ, ಇನ್ನೆಂದು ಹಾಗೆ ಮಾಡಲಾರರು ಎಂಬ ಕಟು ಸತ್ಯವನ್ನು ಅರಗಿಸಿಕೊಳ್ಳುವುದು ಹೇಗೆ?

ಒಂದು ಕಾಲದಲ್ಲಿ ಹುಲಿಯಂತೆ ಘರ್ಜಿಸುತ್ತಿದ್ದ ಅಪ್ಪ ಇಲಿಯಂತಾಗಿದ್ದರು. ಪೋರ್ಟಿಕೋದ ಮೂಲೆಯಲ್ಲಿ ಕುಳಿತಿದ್ದ ಅವರು ನನ್ನ ನೋಡುತ್ತಲೇ ಎದ್ದು ಬಂದರು. ನನ್ನ ಕೈ ಹಿಡಿಯಬೇಕೋ, ತಬ್ಬಿಕೊಳ್ಳಬೇಕೋ ಏನು ಮಾಡಬೇಕೆಂದು ಗೊತ್ತಾಗದ ಗೊಂದಲಕ್ಕೆ ಬಿದ್ದಿದ್ದರೆನ್ನಿಸುತ್ತದೆ, ಈಗ ಬಂದ್ಯಾ ಚಾಮೀ.... ನಿನ್ನವ್ವ..... ಅಷ್ಟೆ ಅವರಿಗೆ ಹೇಳಲಾಗುತ್ತಿದ್ದುದು. ಬಾಯಿಗೆ ಅಂಗವಸ್ತ್ರ ಅಡ್ಡಹಿಡಿದ ಅಪ್ಪ ಪುಟ್ಟ ಮಕ್ಕಳಂತೆ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಅಪ್ಪನೂ ಅಳುತ್ತಾರೆ ಎಂಬುದು ನಂಗಾಗಲೇ ಗೊತ್ತು. ಅಷ್ಟರಲ್ಲಿ ಅಕ್ಕ ತಬ್ಬಿ ಒಳಕರೆದುಕೊಂಡು ಹೋದರೆ, ಅತ್ತಿಗೆ ನೀರು ತಂದು ಕೊಟ್ಟರು.

ಅಭ್ಯಾಸ ಬಲದಂತೆ ಅವ್ವನ ಕೋಣೆಗೆ ಹೋದೆ. ನಡು ಮನೆಯಲ್ಲಿ ಅವ್ವನ ಸಂಕೇತವೆಂಬಂತೆ ಕಾಲುದೀಪ ಉರಿಯುತ್ತಿತ್ತು, ಇಲ್ಲೇ ಅವ್ವ ಮಲಗಿದ್ದರು, ಅಕ್ಕ ಹೇಳಿದಳು. ಏನು ಮಾಡಲೀ... ಕುಳಿತುಕೊಳ್ಳಲೇ, ಏಳಲೇ, ಮಲಗಲೇ.... ಒಂದು ಗೊತ್ತಾಗುತ್ತಿಲ್ಲ. ಮಾಮೂಲಿಯಾದರೆ ಮನೆ ತಲುಪುತ್ತಲೇ ಪ್ರಯಾಣದ ಸುಸ್ತು, ಬಳಲಿಕೆಗಳೆಲ್ಲ ಮಾಯವಾಗುತ್ತಿತ್ತು. ಬ್ಯಾಗುಗಳನ್ನೆಲ್ಲ ಅವ್ವನ ಕೋಣೆಯಲ್ಲಿ ಎಸೆದು, ಮನೆಯಿಡೀ ಸುತ್ತು ಹಾಕಿ ಬಚ್ಚಲಿಗೆ ಹೋಗಿ ಮುಖ ತೊಳೆದು ಬರುತ್ತಲೇ 'ಕೂಸು ಬರುತ್ತಾಳೆ'(ನಾನು ಎಷ್ಟುದೊಡ್ಡ ಎಮ್ಮೆಯಾಗಿದ್ದರೂ) ಎಂದು ವಿಶೇಷವಾಗಿ ಮಾಡಿಟ್ಟಿರುತ್ತಿದ್ದ ತಿಂಡಿ ತಿನಿಸುಗಳನ್ನು ತಟ್ಟೆಯಲ್ಲಿ ಹಾಕಿ ಅವರು ರೆಡಿ ಮಾಡಿಟ್ಟಿರುತ್ತಿದ್ದರು. ಇವುಗಳಿಗಾಗೇ ಕಾದಿರುವಂತಿರುತ್ತಿದ್ದ ನಾನು ತಿನ್ನಲೇ ಬಂದವಳಂತೆ ಕಬಳಿಸಲಾರಂಭಿಸುತ್ತಿದ್ದೆ. ಆದರೆ ಈ ಸರ್ತಿ ಹಾಗನ್ನಿಸುವುದಾದರೂ ಹೇಗೆ. ನನ್ನನ್ನು ಕಳುಹಿಸಲು ರೈಲುನಿಲ್ದಾಣಕ್ಕೆ ಬಂದಿದ್ದ ತ್ರಾಸಿ ಮತ್ತು ಪಾಟೀಲ್ ತೆಗೆಸಿಕೊಟ್ಟಿದ್ದ ಒಂದು ಲೀಟರ್ ನೀರು ಬಿಟ್ಟರೆ, ಮರುದಿನ ಬೆಳಿಗ್ಗೆ ರೈಲಿನಲ್ಲಿ ಒಂದು ಲೋಟ ಕಾಫಿ ಖರೀದಿಸಿ ಕುಡಿದಿದ್ದೆ, ಅಷ್ಟೆ. ಆದರೂ ಹಸಿವಾಗುತ್ತಿರಲಿಲ್ಲ. ಏನೂ ತಿನ್ನೋದೆ ಬೇಡ ಅನ್ನಿಸುತ್ತಿತ್ತು. ನನ್ನನ್ನು ಸಾಧ್ಯವಿರುವಷ್ಟು ನೋವಾಗದಂತೆ ನಡೆಸಿಕೊಳ್ಳಬೇಕೆಂದು ಅಣ್ಣ-ಅತ್ತಿಗೆ, ಅಕ್ಕನವರು ಶತಾಯ-ಗತಾಯ ಪ್ರಯತ್ನಿಸುತ್ತಿದ್ದರು. ನಾನೇನು ಚಿಕ್ಕಹುಡುಗಿಯಲ್ಲ. ಆದರೂ, ನಮ್ಮ ಮನೆಯಲ್ಲಿ ಕೊನೆಯವಳು ಮತ್ತು 'ನೆಲೆ' ಇಲ್ಲದವಳು. ಉಳಿದವರೆಲ್ಲ ಜೀವನದಲ್ಲಿ ನೆಲೆಕಂಡವರು.

****
ನಾನು ಮನೆತಲುಪಿದ ಮರುದಿನ ಮೂರನೆಯ ಶುದ್ಧ. ಬೂದಿ ಒಪ್ಪ ಮಾಡಲು ನಮ್ಮ (ಅಪ್ಪನ)ಕುಟುಂಬಿಕರು ಸೋದರ ಮಾವಂದಿರು, ಚಿಕ್ಕಮ್ಮ, ದೊಡ್ಡಮ್ಮಂದಿರ ಪೈಕಿ ಎಲ್ಲರೂ ಸೇರಿದ್ದರು. ಎಲ್ಲರೊಂದಿಗೆ ನಾನೂ ಅವ್ವನ ಹೊಸ ಜಾಗಕ್ಕೆ ತೆರಳಿದೆ. ಅಷ್ಟೆಲ್ಲ ಕಷ್ಟ, ಕಾರ್ಪಣ್ಯಗಳೊಂದಿಗೆ ಜೀವನ ನಡೆಸಿದ್ದ, ಮನೆಯ ಯಜಮಾನಿಯಾಗಿದ್ದ, ಅಪ್ಪನ ರೌದ್ರಾವತಾರದ ಸಿಟ್ಟನ್ನು ಅರಗಿಸಿಕೊಂಡಿದ್ದ, ಮಕ್ಕಳು, ಮೊಮ್ಮಕ್ಕಳನ್ನು ಜೋಪಾನ ಮಾಡಿ, ಊರಿಗೇ ಅವ್ವನಾಗಿ ಮೆರೆದು, ಹತ್ತಿರಹತ್ತಿರ ಎಂಟು ದಶಕಗಳ ತುಂಬು ಜೀವನ ಕಂಡ ಅವ್ವ, ಇಷ್ಟಗಲದಲ್ಲಿ ಬೂದಿಯಾಗಿದ್ದರು. ಅವ್ವನಿಗೆ ಕೊನೆಯದಾಗಿ ತೊಟ್ಟು ನೀರುಕೊಡುವ ಅದೃಷ್ಟ ನಂಗಿರಲಿಲ್ಲ. 'ಪರಿಹಾರ' ಎಂಬಂತೆ ಆ ಜಾಗಕ್ಕೆ ನನ್ನ ಕೈಯಲ್ಲಿ ಹಾಲು-ತುಪ್ಪ ಹಾಕಿಸಿದರು. ಹಾಲುಣಿಸಿದ ಅವ್ವನಿಗೆ ಅಷ್ಟೆ ಮಾಡಲು ನಂಗೆ ಧಕ್ಕಿದ್ದು! "ನಾರಾಯಣ ಅನ್ನು, ಸ್ವರ್ಗಕ್ಕೇ ಹೋಗಿ ಅನ್ನು..." ಯಾರೋ ಹೇಳುತ್ತಿದ್ದರು. (ಉಳಿದಂತೆ ಆದರೆ, ಸ್ವರ್ಗ ನರಕವನ್ನು ಯಾರು ಕಂಡಿದ್ದೀರಿ ಎಂಬ ವಾದಕ್ಕೆ ನಿಲ್ಲುತ್ತಿದ್ದೆನೋ ಏನೋ) ನಾನೆಲ್ಲಿ ಕುಸಿಯುತ್ತೇನೋ ಎಂದು ನನ್ನನ್ನೇ ಗಮನಿಸುತ್ತಾ ನನ್ನಿಬ್ಬರು ಅಕ್ಕಂದಿರು ಕಾವಲು ಕಾಯುವಂತೆ ನಿಂತಿದ್ದರು. (ಧೈರ್ಯವಾಗಿರು... ಅಳಬೇಡ, ಅಳಬಾರದು. ನೀನು ಅತ್ತರೆ ಅಮ್ಮನ ಆತ್ಮ ಕಷ್ಟಪಡುತ್ತದೆ. ಧೈರ್ಯವಾಗಿ ಹೋಗಿ ಬಾ...) ಗೆಳತಿ ನಯನ ಹೇಳಿದ ಸಮಾಧಾನದ ಮಾತುಗಳು ಕಿವಿಯಲ್ಲಿ ಮೊರೆಯುತ್ತಿತ್ತು. ಅಳಬಾರದು, ಕಣ್ಣೀರು ನೆಲಕ್ಕೆ ಉರುಳಬಾರದು ಅನ್ನುತ್ತಿದ್ದರು ಒಬ್ಬ ಚಿಕ್ಕಪ್ಪ. ಕಣ್ಣಿಂದ ನಿಯಂತ್ರಣವಿಲ್ಲದಂತೆ ಸುರಿಯುತ್ತದ್ದ ಹನಿಗಳು ನೆಲಕ್ಕೆ ಬಿದ್ದವೋ, ತೋಟದಲ್ಲಿ ಬೆಳೆದಿದ್ದ ಹುಲ್ಲಿನ ಮೇಲೆ ಜಾರಿದವೋ, ಇಲ್ಲ ತೊಟ್ಟಿದ್ದ ಉಡುಪಿನಲ್ಲಿ ಲೀನವಾದವೋ ಗಮನಿಸುವ ವ್ಯವಧಾನ ಯಾರಿಗಿತ್ತು?

ಎಲ್ಲ ಶುದ್ಧವಾಗಬೇಕು. ಯಾರು ಮನೆಗೆ ಹತ್ತಬೇಡಿ. ಪುಣ್ಯಾರ್ಚನೆಯಾಗಬೇಕು. 'ತಿಳಿದವರು' ಆದೇಶಿಸುತ್ತಿದ್ದರು. ಛೇ, ಇಷ್ಟು ದಿನಒಟ್ಟಿಗೆ ಇದ್ದ ಅಮ್ಮನ ಕೆಲಸವೂ ಅಶುದ್ಧವೇ? ಮನದೊಳಗೆ ಹೇಳಲಾಗದ, ಕೇಳಲಾಗದ, ಗೊಂದಲ, ತಳಮಳ. ಸ್ಪ್ರಿಂಕ್ಲರ್ ಜೆಟ್ಟಿಗೆ ಅಣ್ಣ ಪೈಪ್ ಸಿಕ್ಕಿಸಿದ್ದ. ಎಲ್ಲರಂತೆ ನಾನು ಪೈಪಿನಲ್ಲಿ ಸುರಿಯುತ್ತಿದ್ದ ತಣ್ಣೀರಿಗೆ ತಲೆ ಒಡ್ಡಿದೆ. ನೀವು ಮಕ್ಕಳೆಲ್ಲ ಈ ಸೊಪ್ಪು ಹಾಕಿ ಸ್ನಾನ ಮಾಡಬೇಕು. ಅತ್ತೆಯೊಬ್ಬರು ಸೂಚಿಸಿದರು. ಯಾರು ಏನೇ ಹೇಳಿದರೂ ಯಂತ್ರದಂತೆ ಮಾಡುತ್ತಿದ್ದೆ. ಅವ್ವ ಇದ್ದಿದ್ದರೆ ತಣ್ಣೀರು ಮೀಯಬೇಡ, ಶೀತವಾಗುತ್ತದೆ ಅನ್ನತ್ತಿದ್ದರು. ಅವ್ವನಿಗಾಗಿ ತಣ್ಣೀರು ಮೀಯಲೇ ಬೇಕು, ಇದು ನನ್ನ ಹಠ. ಗೊತ್ತಿಲ್ಲದಂತೆ 'ನಾರಾಯಣ, ಸ್ವರ್ಗಕ್ಕೇ ಹೋಗಿ' ಶಬ್ದಗಳು ಮನದೊಳಗೆ ರಿಪೀಟ್ ಆಗುತ್ತಿದ್ದವು.
******
ಅಂಗಳದ ತುಂಬ ಶಾಮಿಯಾನ. ಮನೆಯೊಳಗೆ, ಜಗಲಿಯಲ್ಲಿ ಕೊಟ್ಟಿಗೆಯಲ್ಲಿ ಮನೆಯಿಂದ ಮಾರ್ಗದ ತನಕ ಎಲ್ಲೆಲ್ಲೂ ನೆಂಟರಿಷ್ಟರು, ನೆರೆಹೊರೆಯವರು, ಗೊತ್ತಿದ್ದವರು, ಇಲ್ಲದವರು ಜನವೋಜನ. ಭಾವಂದಿರು, ಮಾವಂದಿರು, ಇತರರು ಸುಧಾರಣೆಯ ಜವಾಬ್ದಾರಿಯಿಂದ ಅತ್ತಿತ್ತ ಓಡಾಡುತ್ತಿದ್ದಾರೆ. ಅಂಗಳದ ತುದಿಯಲ್ಲಿ ಅಡುಗೆ ಸಿದ್ಧವಾಗುತ್ತಿದೆ. ಬಂದವರೆಲ್ಲ, ಅವಳೆಲ್ಲಿ, ಕೊನೆಯವಳು ಎನ್ನುತ್ತಾ ನನ್ನನ್ನು ಸಂತೈಸಲು ಹುಡುಕುತ್ತಿದ್ದರು.

ಅಂದು ಹನ್ನೊಂದು. ದುಖದ ಜತೆಗೆ ಜ್ವರ, ಕೆಮ್ಮು ನೆಗಡಿ, ತಲೆನೋವು ಸೇರಿತ್ತು. ತಲೆಎತ್ತಲಾಗುತ್ತಿಲ್ಲ. ಯಾರನ್ನೂ ನೋಡೋದು ಬೇಡ, ಮಾತಾಡೋದು ಬೇಡ ಅನ್ನಿಸುತ್ತಿತ್ತು. ಹಾಗೆ ಮಾಡಲಾಗುತ್ತಾ? ಮಾತಿಗಿಂತ ಮೊದಲೇ ದುಃಖ ಉಮ್ಮಳಿಸುತ್ತಿತ್ತು. ಅಕ್ಕನ ಮಕ್ಕಳೆಲ್ಲ ಅನಾರೋಗ್ಯ ಪೀಡಿತ ಚಿಕ್ಕಮ್ಮನ ಸೇವೆಗೆ ಟೊಂಕ ಕಟ್ಟಿ ಸುತ್ತುವರಿದಿದ್ದರು. ಎಲ್ಲೆಲ್ಲೂ ಜನ ಗಿಜಿಗಿಜಿ, ಓಡಾಟ, ಕಾರ್ಯಕ್ರಮಗಳು, ಹಾಗಲ್ಲ ಹೀಗೆ ಎಂಬ ಚರ್ಚೆ, ಇದಾದ ಮೇಲೆ ಅದು, ಅದಾದಮೇಲೆ ಇದು ಎಂಬ ಸಮಜಾಯಿಷಿ, ವಾದ್ಯ-ಬ್ಯಾಂಡು.... ಇವೆಲ್ಲ ಇದ್ದರೂ ನಂಗ್ಯಾಕೋ ಅವ್ವನಿಲ್ಲದ ನಮ್ಮ ಮನೆಯ ಮೊದಲ (ಅವರದ್ದೇ)ಕಾರ್ಯಕ್ರಮ ಖಾಲಿಖಾಲಿ... ಈ ಹಿಂದೆ ನಡೆದ ನಾಲ್ಕು ಮದುವೆಗಳು, ಗೃಹ ಪ್ರವೇಶ, ಸೀಮಂತಗಳು, ಪೂಜೆ. ಭೂತದ ಹರಿಕೆ, ಕೋಲ, ಮಗುವಿನ ನಾಮಕರಣ ಎಲ್ಲ ಕಾರ್ಯಕ್ಕೂ ಅವ್ವನ ನೇತೃತ್ವ. ಎಲ್ಲೆಲ್ಲೂ ಅವ್ವ.

ನಾವು ನಾಲ್ಕು ಹೆಣ್ಣು ಮತ್ತು ಒಂದು ಗಂಡು- ಹೀಗೆ ಐದುಮಕ್ಕಳು. ಏಕೈಕ ಪುತ್ರನೆಂಬ ಕಾರಣಕ್ಕೆ ಅಣ್ಣನ ಮೇಲೆ ಅವರಿಗೆ ಅದೆಂಥಾ ಪ್ರೀತಿ- ಅಕ್ಕರೆ ಅಂದರೆ, ಅದಕ್ಕೆ ನಾನಿಲ್ಲಿ ಯಾವಪದ ಬಳಸಿದರೂ ಸಮವಾಗದು. ಅವನಿಗೆ ಕುಂಬಳಕಾಯಿ ಕಡಿಯೋ ಮಗನೆಂದು ನಾವು ಛೇಡಿಸುತ್ತಿದ್ದೆವು. ಆದರೆ, ಆ ಕುಂಬಳ ಕಾಯಿ ಕಡಿವ, ಮನೆಯೆ ಮೆಟ್ಟಿಲಿನೆದುರು ಮೊಣಕಾಲೂರಿ ಕೂದಲು ತೆಗೆಸುವ, ಒಂಟಿಕಾಲಲ್ಲಿ ನಿಂತು ಪ್ರಾರ್ಥಿಸುವ ಶಾಸ್ತ್ರದ ಘಳಿಗೆಗಳು..... ಅಬ್ಬಾ ಅದೆಷ್ಟು ಕ್ರೂರ!

ಅವ್ವನ ಹೆಸರಲ್ಲೇ ಅವರಿಗಿಷ್ಟದ ಅಡುಗೆ ಸುಮಾರು ಸಾವಿರ ಮಂದಿಗೆ ಸಿದ್ದವಾಗಿತ್ತು. ಇವುಗಳನ್ನೆಲ್ಲ ಅವರ ಸಮಾಧಿಯ ಬಳಿಗೊಯ್ದು ಬಡಿಸಿದೆವು. ಈ ತಿಂಡಿ ಪದಾರ್ಥಗಳನ್ನೆಲ್ಲ ಗೆರಟೆ(ತೆಂಗಿನಕಾಯಿ ಚಿಪ್ಪು)ಯಲ್ಲಿಡಬೇಕಂತೆ. ಅಪ್ಪನಿಗೆ ಗೊತ್ತಿಲ್ಲದೆ(ಬಯ್ಗುಳಕ್ಕೆ ಹೆದರಿ), ಕದ್ದು ಮುಚ್ಚಿ, ಹೊಟ್ಟೆಬಾಯಿ ಕಟ್ಟಿ ಮನೆತುಂಬ ಪಾತ್ರೆ ಪಗಡಿಗಳನ್ನು ತುಂಬಿಸಿದ್ದ ಅವ್ವನಿಗೆ ಗೆರಟೆಯಲ್ಲಿ ಬಡಿಸುವುದನ್ನು ಹೇಗೆ ಸಹಿಸಿಕೊಳ್ಳಬೇಕು? ಇದನ್ನೆಲ್ಲ ಕಂಡಾಗ, ಆ ಪರಿಸ್ಥಿತಿಯಲ್ಲೂ ಈ ಪದ್ದತಿಗಳಿಗೆಲ್ಲ ತಿದ್ದುಪಡಿ ಮಾಡಬೇಕನ್ನಿಸುತ್ತಿತ್ತು.

ಎಲ್ಲಾ ಶಾಸ್ತ್ರವನ್ನೂ ಪಾಸಕ್ಕೆ ನಿಂತಿದ್ದ ಅಣ್ಣನ ಕೈಯಲ್ಲೇ ಮಾಡಿಸುತ್ತಿದ್ದರು, ಕೊನೆಗೆ ಸ್ವರ್ಗಕ್ಕೆ ಸಂದಿಸುವಾಗ ತಂಗಿಯನ್ನೂ ಸೇರಿಸಿಕೊ ಎಂಬ ಸಲಹೆ ಬಂತು. ತಲೆಮೇಲೆ ಕೈ ಇರಿಸಿ, ಮೊಣಕಾಲೂರಿ, ಅವ್ವಾ..... ಸ್ವರ್ಗಕ್ಕೇ ಹೋಗಿರೆಂಬ ಮೊರೆ ಇರಿಸಿದೆ. ಅಲ್ಲೇ ಕುಳಿತಿರೋಣ ಏಳುವುದೇ ಬೇಡ ಎಂಬ ಮನಸ್ಥಿತಿ. ಯಾರೋ ರಟ್ಟೆಹಿಡಿದು ಎತ್ತಿದರು. ಸ್ವರ್ಗ ನರಕ ಇದೆಯೋ ಇಲ್ಲವೋ ನಂಗೊತ್ತಿಲ್ಲ. ಉಸಿರು ನಿಂತಮೇಲೆ ಎಲ್ಲಿ ಹೋಗಿದ್ದೀರೆಂದು ತಿಳಿದೂ ಇಲ್ಲ. ಅವ್ವಾ... ನೀವೆಲ್ಲೇ ಹೋಗಿ, ಎಲ್ಲೇ ಇರಿ, ನೆಮ್ಮದಿಯಿಂದ, ಶಾಂತಿಯಿಂದ ಇರಿ ಎಂದು ಮಾತ್ರ ನಾನು ಪ್ರಾರ್ಥಿಸಬಲ್ಲೆ. ಮತ್ತು ಅನುದಿನವೂ ನಾನೀಗ ಅದನ್ನೇ ಮಾಡುತ್ತಿದ್ದೇನೆ.

****

ಮರೆಯಲಾಗದ್ದು: 2007ರ ಜುಲೈ 30ರಂದು ಅಮ್ಮನಿಗೆ ಹೃದಯಾಘಾತವಾಗಿತ್ತು. 'ಸೀರಿಯಸ್' ಎಂಬುದಾಗಿ ಅಣ್ಣನ ಫೋನ್ ಬಂದಾಗ ಏನುಮಾಡಬೇಕೆಂದು ತಿಳಿಯದೆ ಕುಸಿದಿದ್ದೆ. ಕಚೇರಿಯಲ್ಲಿದ್ದ ನನ್ನೆಲ್ಲಾ ಸಹೋದ್ಯೋಗಿಗಳು ನಂಗೆ ಸಹಾಯ ಹಸ್ತ ಚಾಚಿದ್ದರು. ಬಳಿಕ ಪರ್ವಾಗಿಲ್ಲ ಚೇತರಿಸಿಕೊಂಡರು ಎಂಬ ಸುದ್ದಿ ತಿಳಿದ ಮೇಲೆ ನಾನೂ ಇಲ್ಲಿ ಚೇತರಿಸಿಕೊಂಡಿದ್ದೆನಾದರೂ ತಕ್ಷಣ ಊರಿಗೆ ತೆರಳಿದ್ದೆ. ಆಸ್ಪತ್ರೆವಾಸಿಯಾಗಿದ್ದ ಅವರ ಬೇಕುಬೇಡಗಳನ್ನು ಗಮನಿಸಿಕೊಳ್ಳುತ್ತಾ ಸುಮಾರು 14 ದಿನಗಳಕಾಲ ಅವರೊಂದಿಗಿದ್ದೆ. ರಜೆಯ ಬರಗಾಲದ ಕಚೇರಿ ನಮ್ಮದು. ಅಂತಹ ಕೆಲಸದೊತ್ತಡದ ಸಂದರ್ಭದಲ್ಲೂ, ಪರಿಸ್ಥಿತಿ ಅರ್ಥಮಾಡಿಕೊಂಡ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಸೌಮ್ಯ ಮತ್ತು ನನ್ನ ಐಆರ್‌ಎ ಬೆನ್ನಿ ನಂಗೆ ಅಮ್ಮನೊಡನಿರಲು ಅವಕಾಶ ಕಲ್ಪಿಸಿದ್ದರು. ಆ ಹದಿನೆಂಟು ದಿನಗಳು ಮಾತ್ರ ನಾನು ಕೊನೆಯದಾಗಿ ಅಮ್ಮನೊಂದಿಗೆ ಹೆಚ್ಚುಕಾಲವಿದ್ದದ್ದು.

ಆ ಸಂದರ್ಭದಲ್ಲಿ ಹೆಚ್ಚೆಂದರೆ 15ದಿನವೆಂದು ವೈದ್ಯರು ಗಡುವು ನೀಡಿದ್ದರು. ಆ ಗಡು ದಾಟಿತು. ಅವರು ಬದುಕುಳಿದರೂ ನೀವು ಅವರ ಸರಾಗ ಉಸಿರಾಟಕ್ಕೆ ದಿನನಿತ್ಯ ಆಕ್ಸಿಜನ್ ನೀಡಬೇಕು, ಆಕ್ಸಿಜನ್ ಡಬ್ಬ ಖರೀದಿಸಿ ಎಂದಿದ್ದರು ವೈದ್ಯರು. ಆದರೆ ವೈದ್ಯರಿಗೆ ಸಡ್ಡು ಹೊಡೆಯುವಂತೆ ಅಮ್ಮ ಚೇತರಿಸಿಕೊಂಡದ್ದೊಂದು ಪವಾಡ. (ಸಹೋದ್ಯೋಗಿಗಳು, ಹಿತೈಷಿಗಳ ಹಾರೈಕೆ, ಪ್ರಾರ್ಥನೆಯ ಫಲವಿರಬುಹುದು) ಚಿಕ್ಕಪುಟ್ಟ ಕೆಲಸಗಳನ್ನು ಮಾಡುವಷ್ಟು ಆರೋಗ್ಯವಂತರಾಗಿದ್ದ ಅವ್ವ, ಮತ್ತೆ ಕಾರುಬಾರಕ್ಕಿಳಿಯುವ ಉತ್ಸಾಹಕ್ಕೆ ಮರಳಿದ್ದರು. ಅಡಿಕೆ ಸುಲಿಯಲು ಹೋಗಿ ಅಣ್ಣನ ಕೈಯಲ್ಲಿ ಬಯ್ಗಳು ತಿಂದದ್ದೂ ಉಂಟು.

ಇದಾದ ಬಳಿಕ ಎರಡು ಮೂರು ಬಾರಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮತ್ತೆ ಆಸ್ಪತ್ರೆ-ಮನೆ ಹೀಗೆ.... ಸಾಗಿತ್ತು. ಇಂತಹ ಕಣ್ಣುಮುಚ್ಚಾಲೆಯಾಟ ಬಹುಶಃ ಮಾನಸಿಕ ಸಿದ್ಧತೆಗೆ ಅಮ್ಮ ನಮಗೆ ನೀಡಿದ ಸೂಚನೆ ಇರಬೇಕು. ದೇವ್ರೇ... ಆಟಿ(ಮಳೆಗಾಲ)ತಿಂಗಳಲ್ಲಿ ಏನಾದರೂ ಆದರೆ ಏನು ಗತಿ ಎಂಬುದು ನಮ್ಮೆಲ್ಲರ ಚಿಂತೆಯಾಗಿತ್ತು. ಆದರೆ ಇದಕ್ಕೆಲ್ಲ ವ್ಯತಿರಿಕ್ತ ಎಂಬಂತೆ ಮೊನ್ನೆ ಜನವರಿ 31ರಂದು ಇದ್ದಕ್ಕಿದ್ದಂತೆ ಎದ್ದು ಹೋದಂತೆ ನಮ್ಮೆಲ್ಲರನ್ನೂ ಅಗಲಿ ಹೋಗೇ ಬಿಟ್ಟರು. ಅದೂ ಶನಿವಾರ ಅಪರಾಹ್ನ. ಯಾರಿಗೂ ರಜೆಗೆ ತೊಂದರೆಯಾಗಬಾರದು ಎಂದು ಗ್ರಹಿಸಿದ್ದರೋ....